ADVERTISEMENT

ರಾಯಚೂರು | ಕೃಷ್ಣಾ ಸೇತುವೆ ದುರಸ್ತಿ: ಪರ್ಯಾಯ ಮಾರ್ಗ ಬಳಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 16:03 IST
Last Updated 13 ಜನವರಿ 2024, 16:03 IST
ನಿಖಿಲ್ ಬಿ,ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 
ನಿಖಿಲ್ ಬಿ,ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ    

ರಾಯಚೂರು: ‘ತಾಲ್ಲೂಕಿನ ದೇವಸೂಗೂರು ಬಳಿಯ ಕೃಷ್ಣಾ ಮೇಲ್ಸೇತುವೆ ದುರಸ್ತಿ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಜ.17ರಿಂದ ಮಾರ್ಚ್ 1ರವರೆಗೆ ಸೇತುವೆ ಮೇಲಿನ ಸಂಚಾರ ನಿಷೇಧಿಸಲಾಗಿದ್ದು ಪ್ರಯಾಣಿಕರು ಪರ್ಯಾಯ ರಸ್ತೆ ಮೂಲಕ ಸಂಚರಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದ್ದಾರೆ. 

ಕೃಷ್ಣಾ ಮೇಲ್ಸೇತುವೆ ತೀರಾ ಹದಗೆಟ್ಟ ಕಾರಣ ದುರಸ್ಥಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, 45 ದಿನಗಳ ಕಾಲ ಮಾರ್ಗ ಬದಲಿಸಲಾಗಿದೆ.

ಲಿಂಗಸುಗೂರು ರಸ್ತೆಯಿಂದ ಮಕ್ತಲ್, ಮಹೆಬೂಬನಗರ, ಹೈದರಾಬಾದ್ ಕಡೆಗೆ ಹೋಗುವ ವಾಹನಗಳನ್ನು ಬಸವೇಶ್ವರ ವೃತ್ತ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಸ್ಟೇಷನ್ ವೃತ್ತ, ಆರ್.ಟಿ.ಒ ವೃತ್ತದ ಮೂಲಕ ಯರಗೇರಾ ಕರ್ನೂಲ್ ಕ್ರಾಸ್ ಮುಖಾಂತರ ತೆಲಂಗಾಣದ ಐಜಾ, ಗದ್ವಾಲ್ ಮುಖಾಂತರ ಸಂಚರಿಸಬೇಕಿದೆ.

ADVERTISEMENT

ಯರಗೇರಾ ರಸ್ತೆಯಿಂದ ಮಕ್ತಲ್, ಮಹೆಬೂಬನಗರ, ಹೈದರಾಬಾದ್ ಕಡೆಗೆ ಹೋಗುವ ವಾಹನಗಳು ರಾಯಚೂರು ನಗರದಿಂದ ಯರಗೇರಾ ಕರ್ನೂಲ್ ಕ್ರಾಸ್ ಮುಖಾಂತರ ತೆಲಂಗಾಣದ ಐಜಾ, ಗದ್ವಾಲ್  ಮಾರ್ಗವಾಗಿ ವಾಹನ ಸಂಚರಿಸಲಿದೆ.

ರಾಯಚೂರು ನಗರದಿಂದ ಯಾದಗಿರಿ, ಕಲಬುರಗಿ ಕಡೆಗೆ ಹೋಗುವ ವಾಹನಗಳು ನಗರದ 7 ಮೈಲ್ ಕ್ರಾಸ್, ಕಲ್ಮಲಾ,  ದೇವದುರ್ಗ, ಹೂವಿನಹೆಡಗಿ ಸೇತುವೆ ಮುಖಾಂತರ ಯಾದಗಿರಿ, ಶಹಪೂರ, ಕಲಬುರಗಿ ಕಡೆಗೆ ಹೋಗಬೇಕು. ಹೈದರಾಬಾದ್ ಕಡೆಯಿಂದ ರಾಯಚೂರು ಕಡೆಗೆ ಬರುವ ವಾಹನಗಳು ಮರಿಕಲ್, ಆತ್ಮಕೂರು ಕ್ರಾಸ್, ಉಂಡ್ಯಾಲ, ಅಮರಚಿಂತ, ಜುರಾಲ ಡ್ಯಾಂ, ಗದ್ವಾಲ, ಐಜಾ, ಯರಗೇರಾ ಕರ್ನೂಲ್ ಕ್ರಾಸ್ ಮೂಲಕ ರಾಯಚೂರಿಗೆ ಬರಬಹುದು.

ಮಕ್ತಲ್ ಕಡೆಯಿಂದ ಬರುವ ವಾಹನಗಳನ್ನು ಮಕ್ತಲ್, ದಂಡ್, ರುದ್ರ ಸಮುದ್ರಂ, ಕೊಂಡದೊಡ್ಡಿ, ಜುರಾಲ ಡ್ಯಾಂ, ಗದ್ವಾಲ, ಐಜಾ, ಯರಗೇರಾ ಕರ್ನೂಲ್ ಕ್ರಾಸ್ ಮೂಲಕ ಹಾಗೂ ಯಾದಗಿರಿ, ಕಲಬುರಗಿ ಕಡೆಯಿಂದ ರಾಯಚೂರು ಕಡೆಗೆ ಬರುವ ವಾಹನಗಳು, ಯಾದಗಿರಿ, ಶಹಪೂರು, ಹತ್ತಿಗೂಡೂರು ಕ್ರಾಸ್, ಹೂವಿನಹೆಡಗಿ ಸೇತುವೆ, ದೇವದುರ್ಗ, ಗಬ್ಬರು ಮುಖಾಂತರ ರಾಯಚೂರು ನಗರಕ್ಕೆ ಪ್ರವೇಶಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.