ADVERTISEMENT

ವಿಶ್ವಕರ್ಮ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡಿ: ಕೆ.ಪಿ.ನಂಜುಂಡಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 7:35 IST
Last Updated 1 ನವೆಂಬರ್ 2025, 7:35 IST
<div class="paragraphs"><p>ಕೆ.ಪಿ.ನಂಜುಂಡಿ</p></div>

ಕೆ.ಪಿ.ನಂಜುಂಡಿ

   

ಲಿಂಗಸುಗೂರು: ವಿಶ್ವಕರ್ಮ ಸಮಾಜದ ಮಕ್ಕಳ ಶೈಕ್ಷಣಿಕ, ಸಾಮಾಜಿಕ ಪ್ರಗತಿಗಾಗಿ ಪರಿಶಿಷ್ಟ ಪಂಗಡದ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆ ಅಂತಿಮ ಘಟ್ಟದಲ್ಲಿದೆ ಎಂದು ವಿಶ್ವಕರ್ಮ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 30 ಲಕ್ಷ ಇರುವ ವಿಶ್ವಕರ್ಮ ಸಮಾಜದವರಿಗೆ ರಾಜಕೀಯ ಪ್ರಜ್ಞೆ ಇಲ್ಲದ ಕಾರಣದಿಂದಾಗಿ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ಸಮಾಜಕ್ಕೆ ರಾಜಕೀಯ ಶಕ್ತಿ ಇಲ್ಲದಿದ್ದರೆ ಯಾವುದೇ ಪ್ರಗತಿ ಸಾಧ್ಯವಿಲ್ಲ. ಕಳೆದ 25 ವರ್ಷಗಳಿಂದ ಸಮಾಜ ಸಂಘಟಿಸುತ್ತಿದ್ದೇನೆ. 2ಎ ಮೀಸಲಾತಿ ಪಟ್ಟಿಯಲ್ಲಿ 102 ಜಾತಿಗಳಿವೆ. ಈ ಜಾತಿಗಳಿಗೆ ಶೇ 15ರಷ್ಟು ಮೀಸಲಾತಿ ನೀಡಲಾಗಿದೆ. ಕೇವಲ 3-4 ಪ್ರಬಲ ಜಾತಿಗಳನ್ನು ಎದುರಿಸಿ ವಿಶ್ವಕರ್ಮ ಸಮಾಜದವರಿಗೆ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಕಾರಣ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಕಲ್ಪಿಸಬೇಕೆಂದು ವಿಧಾನ ಪರಿಷತ್ ಸದಸ್ಯನಿದ್ದಾಗ ಪ್ರಯತ್ನಪಟ್ಟಿದ್ದೇನೆ. ಪರಿಶಿಷ್ಟ ಪಂಗಡಕ್ಕೆ ಸೇರಿಸುವುದರಿಂದ ನಮ್ಮ ಆಚಾರ ವಿಚಾರ ಸಂಸ್ಕೃತಿ ಬದಲಾಗುವುದಿಲ್ಲ. ಈ ವಿಷಯದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದು ಅದಕ್ಕೆ ಕಿವಿಗೊಡಬಾರದು’ ಎಂದರು.

ADVERTISEMENT

‘ಸರ್ಕಾರ ಸಮಾಜದ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಬೇಕು. ರಾಜ್ಯದಲ್ಲಿರುವ ಮುಜರಾಯಿ ದೇವಸ್ಥಾನಗಳ ಸಮಿತಿಯಲ್ಲಿ ವಿಶ್ವಕರ್ಮ ಸಮಾಜದವರನ್ನು ಸದಸ್ಯರನ್ನಾಗಿ ನೇಮಿಸುವಂತೆ ಸರ್ಕಾರಕ್ಕೆ ಈ ಹಿಂದೆಯೇ ಬೇಡಿಕೆ ಇಟ್ಟಿದ್ದೇನೆ’ ಎಂದರು.

ಡಿಸೆಂಬರ್‌ನಲ್ಲಿ ವಿಶ್ವಕರ್ಮ ಮಹಾಯಜ್ಞ: ಡಿಸೆಂಬರ್‌ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಲೋಕಕಲ್ಯಾಣಾರ್ಥವಾಗಿ ವಿಶ್ವಕರ್ಮ ಮಹಾಯಜ್ಞ ಹಮ್ಮಿಕೊಳ್ಳಲಾಗಿದೆ. ಸಮಾಜದ 75 ಸ್ವಾಮೀಜಿಗಳು, ನಮ್ಮ ಸಮಾಜವನ್ನು ಗೌರವಿಸುವ ವಿವಿಧ ಸಮುದಾಯ ಸ್ವಾಮೀಜಿಗಳ ನೇತೃತ್ವದಲ್ಲಿ ಯಜ್ಞ ನಡೆಯಲಿದೆ. ಇದಕ್ಕಾಗಿ ಪ್ರತಿ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಸಂಘಟನೆ ಜೊತೆ ಸಮಾಜದ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ನಾಗಮೂರ್ತಿ ಸ್ವಾಮೀಜಿ, ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬ್ರಹ್ಮ ಗಣೇಶ, ತಾಲ್ಲೂಕು ಘಟಕದ ಅಧ್ಯಕ್ಷ ಗುಂಡಣ್ಣ ಪತ್ತಾರ, ಕಾಳಪ್ಪ, ಅಮರೇಶ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಬಡಿಗೇರ, ದೇವೇಂದ್ರ, ಸಿದ್ದು ಬಡಿಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.