ADVERTISEMENT

ಸುರಕ್ಷಿತ ಮಾಸ್ಕ್‌ಗಾಗಿ ಹಠ ಹಿಡಿದ ರಿಮ್ಸ್‌ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 9:31 IST
Last Updated 9 ಏಪ್ರಿಲ್ 2020, 9:31 IST
   

ರಾಯಚೂರು: ಶಂಕಿತ ಕೊರೊನಾ ರೋಗಿಗಳ ಉಪಚಾರ ಹಾಗೂ ವೈದ್ಯಕೀಯ ನಿಗಾ ವಹಿಸುವವರಿಗೆ ಉತ್ತಮವಾದ ಮಾಸ್ಕ್‌ ಕೊಡುವ ತನಕ ಕೆಲಸ ಮಾಡುವುದಿಲ್ಲ ಎಂದು ಕೊವಿಡ್‌–19 ವಾರ್ಡ್‌ಗಳಿಗೆ ನಿಯೋಜನೆಯಾದ ಸಿಬ್ಬಂದಿ ಹಠ ಹಿಡಿದ ಪ್ರಸಂಗ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್‌) ಆಸ್ಪತ್ರೆಯಲ್ಲಿ ಗುರುವಾರ ನಡೆಯಿತು.

ಸ್ನಾತಕೋತ್ತರ ವೈದ್ಯರು, ಶೂಶ್ರುಷಕಿಯರು ಹಾಗೂ ಇತರೆ ಸಿಬ್ಬಂದಿಯು ಆಸ್ಪತ್ರೆಯಲ್ಲಿ ಜಮಾಯಿಸಿದ್ದರು. ಮೆಡಿಕಲ್‌ ಸೂಪರಿಂಟೆಡೆಂಟ್‌ ಡಾ.ಭಾಸ್ಕರ್‌ ಅವರು ಮನವೊಲಿಸುವ ಯತ್ನ ನಡೆಸಿದರು.

‘ತ್ರಿ ಲೇಯರ್‌ ಮಾಸ್ಕ್‌’ ಬಳಸಿ ಚೆಲ್ಲಿವಂಥದ್ದಾಗಿದೆ. ಕೊರೊನಾ ಶಂಕಿತರ ವಾರ್ಡ್‌ನಲ್ಲಿ ಇದನ್ನು ಬಳಕೆ ಮಾಡುವುದು ಅಸುರಕ್ಷಿತವಾಗಿದ್ದು, ಏನಾದರೂ ಅನಾಹುತವಾದರೆ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಬರೆದು ಕೊಡಬೇಕು. ಅಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುವುದು ಅಪಾಯಕಾರಿ ಎಂದು ಸಿಬ್ಬಂದಿಯು ಹೇಳಿದರು.

ADVERTISEMENT

ಎನ್‌–95 ಸುರಕ್ಷಿತ ಮಾಸ್ಕ್‌ ವಿತರಿಸುವುದಾಗಿ ರಿಮ್ಸ್‌ ನಿರ್ದೇಶಕ ಡಾ.ಬಸವರಾಜ ಪೀರಾಪುರೆ ಭರವಸೆ ನೀಡಿದ ನಂತರ ಎಲ್ಲರೂ ಕೆಲಸ ಆರಂಭಿಸಿದ್ದಾರೆ. ಸದ್ಯ ಇಬ್ಬರು ಶಂಕಿತರು ಒಪೆಕ್‌ನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದ್ದು, ಒಟ್ಟು 30 ಜನರ ವರದಿಗಳು ಬರುವುದು ಬಾಕಿ ಇದೆ. ಚಂದ್ರಬಂಡಾ ರಸ್ತೆ ಹಾಸ್ಟೆಲ್‌ವೊಂದರಲ್ಲಿ ಇನ್ನುಳಿದವರನ್ನು ಕೊರಂಟೈನ್‌ನಲ್ಲಿ ಇಡಲಾಗಿದೆ.

ರಿಮ್ಸ್‌ ಆಸ್ಪತ್ರೆಯ ಸಿಬ್ಬಂದಿಯನ್ನು ಹೋಂ ಕೊರಂಟೈನ್‌ ಕೇಂದ್ರಗಳಿಗೆ ನಿಯೋಜಿಸಲಾಗಿದೆ. ಅವರ ಆರೋಗ್ಯದ ಸ್ಥಿತಿಗತಿಯನ್ನು ಗಮನಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.