ADVERTISEMENT

ಕವಿತಾಳ | ಸ್ವಂತ ಹಣದಲ್ಲಿ ರಸ್ತೆ ದುರಸ್ತಿ

ಕವಿತಾಳ ಮಳೆಯಿಂದ ಹದಗೆಟ್ಟ ಜಮೀನು ಸಂಪರ್ಕಿಸುವ ರಸ್ತೆ

ಮಂಜುನಾಥ ಎನ್ ಬಳ್ಳಾರಿ
Published 17 ಸೆಪ್ಟೆಂಬರ್ 2025, 6:52 IST
Last Updated 17 ಸೆಪ್ಟೆಂಬರ್ 2025, 6:52 IST
ಕವಿತಾಳ ತೊಪ್ಪಲದೊಡ್ಡಿ ಅಗಸಿಯಿಂದ ಜಮೀನುಗಳಿಗೆ ಸಂಪರ್ಕಿಸುವ ರಸ್ತೆ ಹದಗೆಟ್ಟಿರುವುದು
ಕವಿತಾಳ ತೊಪ್ಪಲದೊಡ್ಡಿ ಅಗಸಿಯಿಂದ ಜಮೀನುಗಳಿಗೆ ಸಂಪರ್ಕಿಸುವ ರಸ್ತೆ ಹದಗೆಟ್ಟಿರುವುದು   

ಕವಿತಾಳ: ಸ್ವಂತ ಹಣದಿಂದ ರಸ್ತೆ ದುರಸ್ತಿ ಮಾಡಿಕೊಳ್ಳುವ ಮೂಲಕ ಇಲ್ಲಿನ ರೈತರು ಮಾದರಿಯಾಗಿದ್ದಾರೆ.

ಪಟ್ಟಣದ ತೊಪ್ಪಲದೊಡ್ಡಿ ಅಗಸಿಯಿಂದ ಜಮೀನುಗಳಿಗೆ ಸಂಪರ್ಕಿಸುವ ಅಂದಾಜು ಒಂದು ಕಿ.ಮೀ ರಸ್ತೆ ಈಚೆಗೆ ಸುರಿದ ಸತತ ಮಳೆಯಿಂದ ತೀವ್ರ ಹದಗೆಟ್ಟಿದೆ. ಕೃಷಿ ಚಟುವಟಿಕೆ ಕೈಗೊಳ್ಳಲು ನಿತ್ಯ ಈ ರಸ್ತೆ ಮೂಲಕ ಜಮೀನುಗಳಿಗೆ ತೆರಳುತ್ತಿದ್ದ ರೈತರು ರಸ್ತೆ ಹಾಳಾದ ಪರಿಣಾಮ ತೊಂದರೆ ಅನುಭವಿಸುವಂತಾಯಿತು.

ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಲಿಲ್ಲ. ಕಡೆಗೆ ಬೇಸತ್ತ ರೈತರು ಜೆಸಿಬಿ ಯಂತ್ರವನ್ನು ಬಾಡಿಗೆ ಪಡೆದು ರಸ್ತೆಯಲ್ಲಿ ಕೆಸರು ತೆರವುಗೊಳಿಸಿ ತಮ್ಮ ಸ್ವಂತ ಟ್ರ್ಯಾಕ್ಟರ್‌ಗಳನ್ನು ಬಳಸಿಕೊಂಡು ಮಣ್ಣು ಹಾಕಿ ರಸ್ತೆ ದುರಸ್ತಿ ಮಾಡಿಕೊಂಡಿದ್ದಾರೆ.

ADVERTISEMENT

‘ಇಲ್ಲಿಂದ ಕಡ್ಡೋಣಿ, ಹುಸೇನಪುರ ಮಾರ್ಗದಲ್ಲಿ ಅನೇಕ ರೈತರು ನೂರಾರು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಜಮೀನುಗಳಿಗೆ ಹೋಗಲು ಈ ರಸ್ತೆ ಬಿಟ್ಟರೆ ಬೇರೆ ರಸ್ತೆ ಇಲ್ಲ, ಬೆಳೆಗಳಿಗೆ ಔಷಧ ಸಿಂಪಡಣೆ ಮಾಡಲು, ಹತ್ತಿ ಬಿಡಿಸಲು, ತೋಟದ ಬೆಳೆಗೆ ನೀರು ಹಾಯಿಸಲು ಹೀಗೆ ವಿವಿಧ ಕೆಲಸಗಳಿಗೆ ರೈತರು, ಕೂಲಿಕಾರರು ನಿತ್ಯ ಈ ರಸ್ತೆಯಲ್ಲಿಯೇ ಓಡಾಡಬೇಕು. ಸತತ ಮಳೆಯಿಂದ ರಸ್ತೆ ಕೆಸರು ಗದ್ದೆಯಂತಾಗಿದೆ. ಅನಿವಾರ್ಯವಾಗಿ ರಸ್ತೆ ದುರಸ್ತಿಗೆ ಮುಂದಾಗಿದ್ದೇವೆ’ ಎಂದು ರೈತರಾದ ಹನುಮಂತ ಚುಕ್ಕಿ, ಮೌನೇಶ ಹಿರೇಕುರಬರ ಮತ್ತು ಮುಕ್ತಾರಪಾಶಾ, ಪಟ್ಟಣ ಪಂಚಾಯಿತಿ ಸದಸ್ಯ ಅಮರೇಶ ಕಟ್ಟಿಮನಿ ಹೇಳಿದರು.

‘ಮಣ್ಣು ಮತ್ತು ಮರಂ ತರಲು ಅಂದಾಜು 8 ಸ್ವಂತ ಟ್ರ್ಯಾಕ್ಟರ್‌ ಬಳಸಿಕೊಂಡಿದ್ದೇವೆ. ಜೆಸಿಬಿ ಯಂತ್ರದ ಬಾಡಿಗೆ ಹಾಗೂ ಮರಂ ಮತ್ತು ಮಣ್ಣು ಖರೀದಿಗೆ ಅಂದಾಜು ₹1.5 ಲಕ್ಷ ಹಣ ಖರ್ಚಾಗಿದೆ’ ಎಂದು ರೈತರಾದ ಸಣ್ಯಪ್ಪ, ಮೌಲಾ, ತಿರುಪತಿ, ಲಿಂಗಪ್ಪ ಹಿರೇ ಕುರುಬರ, ಬಾಷಾಸಾಬ್ ಗಿಡ್ಡಲಿ, ಗೋಯಪ್ಪ ಉಪ್ಪಾರ, ಆದಪ್ಪ, ಮೌನೇಶ ವಟಗಾಲ್ ಮತ್ತು ಅಮರೇಶ ತಿಳಿಸಿದರು.

ಕವಿತಾಳ ತೊಪ್ಪಲದೊಡ್ಡಿ ಅಗಸಿಯಿಂದ ಜಮೀನುಗಳಿಗೆ ಸಂಪರ್ಕಿಸುವ ಹದಗೆಟ್ಟ ರಸ್ತೆಯನ್ನು ರೈತರು ಮಂಗಳವಾರ ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡುತ್ತಿರುವುದು

ಕೃಷಿ ಚಟುವಟಿಕೆಗೆ ತೊಡಕಾಗಿದ್ದ ಕೆಸರುಮಯ ರಸ್ತೆ ಅನಿವಾರ್ಯವಾಗಿ ರಸ್ತೆ ದುರಸ್ತಿಗೆ ಮುಂದಾಗಿದ ರೈತರು ₹1.5 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.