ADVERTISEMENT

ರಾಯಚೂರು | ಬಿಜೆಪಿ ಸುಳ್ಳಿಗೆ ಆಸ್ಕರ್‌ ಅವಾರ್ಡ್‌ ನೀಡಬಹುದು: ಸಲೀಂ ಅಹ್ಮದ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 4:56 IST
Last Updated 17 ಫೆಬ್ರುವರಿ 2026, 4:56 IST
<div class="paragraphs"><p>ರಾಯಚೂರಿನ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿದರು </p></div>

ರಾಯಚೂರಿನ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿದರು

   

ರಾಯಚೂರು: ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಮೋದಿ ಅವರಿಗೆ ಸುಳ್ಳು ಹೇಳುವುದರಲ್ಲಿ ಆಸ್ಕರ್ ಅವಾರ್ಡ್ ಕೊಡಬಹುದು’ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹ್ಮದ್ ವ್ಯಂಗ್ಯವಾಡಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‌‘ಬಿಜೆಪಿ ಸುಳ್ಳು‌ಹೇಳುವ ಸರ್ಕಾರ, ಅಧಿಕಾರಕ್ಕೆ ಬರುವ ಮೊದಲು ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ತಂದು ಜನರ‌ ಬ್ಯಾಂಕ್ ಖಾತೆಗೆ ₹15 ಲಕ್ಷ ಹಣ‌ ಹಾಕುತ್ತೇವೆ. 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣ ಭರವಸೆ ಈಡೇರಿಸಿಲ್ಲ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಹೆಚ್ಚು ಮಾಡಿದೆ.‌ ಬೆಲೆ‌ ಏರಿಕೆಯಿಂದ ದೇಶದ ಜನರು ನೊಂದಿದ್ದಾರೆ. ಸ್ವರ್ಗ ತೋರುಸುತ್ತೇವೆ ಎಂದು ನರಕ ತೋರಿಸುತ್ತಿದ್ದಾರೆ ಎಂದು ದೂರಿದರು.

ADVERTISEMENT

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 12 ವರ್ಷಗಳಾಗಿವೆ. ರಾಜ್ಯಕ್ಕೆ ಶೂನ್ಯ ಕೊಡುಗೆ ನೀಡಿದೆ. ಮಹದಾಯಿ, ಮೇಕೆ ದಾಟು ಯೋಜನೆ ಸಮಸ್ಯೆ ಬಗೆಹರಿಸಿಲ್ಲ. ಬಿಜೆಪಿಯಿಂದ ಗೆದ್ದ ರಾಜ್ಯದ ಮಂತ್ರಿಗಳು ನ್ಯಾಯ ಕೊಡಿಸುವ ಕೆಲಸ ಮಾಡುತ್ತಿಲ್ಲ. ನಿರ್ಮಲಾ ಸೀತಾರಾಮನ್ ಸೇರಿ ರಾಜ್ಯದಿಂದ ಗೆದ್ದ ಕೇಂದ್ರ ಸಚಿವರಿಗೆ ಪ್ರಧಾನಿ ಬಳಿ ಮಾತನಾಡುವ ಧೈರ್ಯವಿಲ್ಲ. ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಆಕ್ರೋಶ ಹೊರಹಾಕಿದರು.

ರಾಜ್ಯ ಸರ್ಕಾರವು, ಗ್ಯಾರಂಟಿ ಯೋಜನೆಗಳ ಮೂಲಕ ಹಲವು ಮೈಲುಗಲ್ಲು ಸಾಧಿಸಿದೆ. ಶಕ್ತಿ ಯೋಜನೆಯಡಿ 6 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. 6ನೇ ಗ್ಯಾರಂಟಿ ಭೂಮಿ ಪಟ್ಟ ನೀಡುವುದು. ಜನರು ನಮ್ಮ ಸರ್ಕಾರದ ಆಡಳಿತದಿಂದ ಸಂತಸರಾಗಿದ್ದಾರೆ. ಮೂರು ಉಪಚುನಾವಣೆಗಳಲ್ಲಿ ನಾವು ಗೆಲುವು ಸಾಧಿಸಿದ್ದೇ‌ ಸಾಕ್ಷಿ’ ಎಂದು ಹೇಳಿದರು.

‘ಗ್ಯಾರಂಟಿಗಳೇ ನಮಗೆ ಶ್ರೀರಕ್ಷೆಯಾಗಿದ್ದು, ನುಡಿದಂತೆ ನಡೆದಿದ್ದೇವೆ. ಮುಂಬರುವ ಜಿ.ಪಂ, ತಾ.ಪಂ ಚುನಾವಣೆಗೆ ಗ್ಯಾರಂಟಿಗಳು ನಮಗೆ ಶ್ರೀರಕ್ಷೆಯಾಗಲಿವೆ. ಮುಂದಿನ ವರ್ಷ ಏಪ್ರಿಲ್, ಮೇನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಚುನಾವಣೆಗೆ ಸಿದ್ಧತೆ ಆರಂಭವಾಗಿದೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನುಡಿದಂತೆ ನಡೆಯುತ್ತೇವೆ’ ಎಂದು ಹೇಳಿದರು.

‘ಬಜೆಟ್‌ನಲ್ಲಿ ಅನೇಕ ಕೆಲಸ, ಜನಪರ ಯೋಜನೆ ಘೋಷಿಸುತ್ತೇವೆ. ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲವಿದ್ದು, ಸರಿಪಡಿಸಿಕೊಳ್ಳಲಾಗುವುದು. ಶೇ 50ರಷ್ಟು ಹಳೆಯ ಸಚಿವರನ್ನು ಬದಲಿಸಿ, ಹೊಸಬರಿಗೆ ಅವಕಾಶ ನೀಡಬೇಕು ಎಂದು ಪಕ್ಷದ ವರಿಷ್ಠರಿಗೆ ತಿಳಿಸಿದ್ದೇವೆ. ಸಂಪುಟ ಬದಲಾವಣೆ ನಿರ್ಧಾರವನ್ನು ಅಂತಿಮವಾಗಿ ವರಿಷ್ಠರು ಕೈಗೊಳ್ಳುತ್ತಾರೆ’ ಎಂದು ತಿಳಿಸಿದರು.

‘ಗೋಡ್ಸೆ ಗಾಂಧೀಯನ್ನು ಕೊಂದರೆ, ಬಿಜೆಪಿಯವರು ಗಾಂಧಿಯ ವಿಚಾರಧಾರೆಗಳನ್ನು ಕೊಂದಿದ್ದಾರೆ. 12 ವರ್ಷಗಳ ನಂತರ ನರೇಗಾದಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಹೇಳಿ, ಯೋಜನೆಯ ಹೆಸರನ್ನು ಬದಲಿಸಿದ್ದಾರೆ. ರಾಜಕೀಯ ಶಡ್ಯಂತ್ರ, ಬಿಜೆಪಿಯ ವೈಫಲ್ಯ ತಿಳಿಸಿ, ಜನರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.

ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ, ಮಹಮ್ಮದ್ ಶಾಲಂ, ಕೆ.ಶಾಂತಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ, ಶ್ರೀದೇವಿ ನಾಯಕ, ರುದ್ರಪ್ಪ ಅಂಗಡಿ, ಅಮರೇಗೌಡ, ಮಹಮ್ಮದ್ ಶಾಲಂ, ಮಲ್ಲನಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಿರ್ಮಲಾ ಬೆಣ್ಣೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.