
ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಕಾರ್ಯಕ್ರಮವನ್ನು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ ಉದ್ಘಾಟಿಸಿದರು
ರಾಯಚೂರು: ‘ಸಂತ ಸೇವಾಲಾಲ್ ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ ಹೇಳಿದರು.
ಇಲ್ಲಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸಂತ ಸೇವಾಲಾಲ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ. ಜಾತಿ, ಧರ್ಮ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಸಮಾನರು ಎಂದು ವಿಶ್ವ ಮಾನವ ಸಂದೇಶ ಸಾರುವ ಮೂಲಕ ಸಮಾಜದಲ್ಲಿ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ. ಬಂಜಾರ ಸಮುದಾಯದವರು ವೀರರು, ಶೂರರು ಮಾತ್ರವಲ್ಲದೇ ವ್ಯಾಪಾರ ಮಾಡುವುದರಲ್ಲಿ ನಿಪುಣರಾಗಿದ್ದಾರೆ. ಸೇವಾಲಾಲ್ ಅವರ ಪವಾಡ, ಜೀವನ ಚರಿತ್ರೆಯ ಕುರಿತು ಎಲ್ಲರೂ ತಿಳಿದುಕೊಳ್ಳಬೇಕು’ ಎಂದು ಹೇಳಿದರು.
‘ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣ ಶಾವಂತಗೇರಾ ಮಾತನಾಡಿ, ‘ಸಂತ ಸೇವಾಲಾಲ್ ಅವರು ಪವಾಡ ಪುರುಷರು, ಸತ್ಯ, ಅಹಿಂಸೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಸಮಾಜದ ಏಳಿಗೆಗಾಗಿ ನಿರಂತರ ಶ್ರಮಿಸಿದ್ದಾರೆ’ ಎಂದು ತಿಳಿಸಿದರು.
‘ಬಂಜಾರ ಸಮುದಾಯದಲ್ಲಿ ಬಡವರೇ ಹೆಚ್ಚಾಗಿದ್ದು, ಅವರು ಶ್ರಮಜೀವಿಗಳು. ಸೇವಾಲಾಲರಂತ ಸತ್ಪುರುಷರ ಜೀವನ ಚರಿತ್ರೆಯನ್ನು ಈಗಿನ ಯುವ ಪೀಳಿಗೆಯು ಅರಿತು, ಸ್ವಲ್ಪವಾದರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
‘ಬಂಜಾರ ಸಮುದಾಯ ಹಿಂದುಳಿದ ಸಮುದಾಯವಾಗಿದ್ದು, ಸಮಾಜ ಕಟ್ಟುವಲ್ಲಿ ಯುವಕರು ಎಲ್ಲರೂ ಒಗ್ಗಟ್ಟಾಗಿ ಸಮುದಾಯ ಬೆಳೆಸಬೇಕಾಗಿದೆ. ನಾವೆಲ್ಲರೂ ಸ್ವಾಭಿಮಾನದಿಂದ ಬದುಕಬೇಕಾಗಿದ್ದು, ಸ್ವಾಭಿಮಾನದಿಂದ ಜೀವನ ಸಾಗಿಸಬೇಕಾಗಿದೆ’ ಎಂದು ಹೇಳಿದರು.
‘ಕಷ್ಟ ಬಂದರೂ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರನ್ನು ಆಸ್ತಿಯನ್ನಾಗಿಸಬೇಕು. ಸರ್ಕಾರದ ವಿವಿಧ ಸೌಲಭ್ಯ ಸವಲತ್ತು ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಎಸ್.ಜೆ. ಮಾತನಾಡಿದರು. ಶಂಕರ ಎಂ. ಪವಾರ್ ಉಪನ್ಯಾಸಕ ನೀಡಿದರು. ಕೃಷ್ಣ ಸ್ವಾಗತಿಸಿದರು. ತಾ.ಪಂ ಇಒ ಚಂದ್ರಶೇಖರ ಪವಾರ, ದಂಡಪ್ಪ ಬಿರಾದಾರ, ಸಮಾಜದ ಮುಖಂಡರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು.
ಸಂತ ಸೇವಾಲಾಲ್ ಜಯಂತಿ ಪ್ರಯುಕ್ತ ಸಂತ ಸೇವಾಲಾಲ್‌ರ ಭಾವಚಿತ್ರ ಮೆರವಣಿಗೆ ನಡೆಯಿತು. ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ ಮೆರವಣಿಗೆಗೆ ಚಾಲನೆ ನೀಡಿದರು. ಲಂಬಾಣಿ ಮಹಿಳೆಯರು ಹಾಗೂ ಯುವಕರು ವಿಶೇಷ ನೃತ್ಯ ಜತೆಗೆ ಡಿಜೆ ಹಾಗೂ ವಿವಿಧ ವಾದ್ಯಮೇಳದೊಂದಿಗೆ ಬಸವೇಶ್ವರ ವೃತ್ತದಿಂದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ರಂಗಮಂದಿರ ತಲುಪಿತು.
ಸಿರವಾರ: ‘ಅಲೆಮಾರಿ ಬಂಜಾರರ ಬದುಕಿನಿಂದ ಬಳಲುತ್ತಿದ್ದ ಜನಾಂಗಕ್ಕೆ ಒಂದೆಡೆ ನೆಲೆ ನಿಲ್ಲುವಂತೆ ಮಾಡಿದರು. ವ್ಯವಸಾಯ, ಪಶುಪಾಲನೆ ಮಾಡಲು ಮಾರ್ಗದರ್ಶನ ನೀಡಿ ಜಾಗೃತಿ ಮೂಡಿಸಿ, ಸಮಾಜವನ್ನು ಮುನ್ನೆಲೆಗೆ ತಂದ ಮಹಾನ್ ಸಂತ ಸೇವಲಾಲ್’ ಎಂದು ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ ಹೇಳಿದರು.
ಪಟ್ಟಣದ ದೇವದುರ್ಗ ರಸ್ತೆಯಲ್ಲಿರುವ ಸಜ್ಜಲಶ್ರೀ ಶರಣಮ್ಮ ತಾಯಿ ಶಾಖಾ ಮಠದ ಆವರಣದಲ್ಲಿ ಬಂಜಾರ ಸಮಾಜದಿಂದ ಸಂತ ಸೇವಲಾಲ್ 287ನೇ ಜಯಂತಿ ಅಂಗವಾಗಿ ಭಾನುವಾರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಬಂಜಾರ ಸಮಾಜವು ಬಹುತೇಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕಿದ್ದು, ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಅಗತ್ಯವಿದೆ’ ಎಂದು ಹೇಳಿದರು.
ಚುಕ್ಕಿ ಸೂಗಪ್ಪ ಸಾಹುಕಾರ, ಜೆ.ಶರಣಪ್ಪಗೌಡ, ಜಿ.ಲೋಕರೆಡ್ಡಿ, ಕೃಷ್ಣ ನಾಯಕ ಸೇರಿದಂತೆ ಸಮಾಜದ ಮುಖಂಡರು ಮಾತನಾಡಿದರು. ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ನೀರಾವರಿ ಇಲಾಖೆ ಆವರಣದಿಂದ ಕಾರ್ಯಕ್ರಮದ ಸ್ಥಳದವರೆಗೆ ಸಂತ ಸೇವಲಾಲ್ ಭಾವಚಿತ್ರ ಮೆರವಣಿಗೆ ನಡೆಯಿತು.
ಬಂಜಾರ ಸಮಾಜದ ಯುವಜನರು, ಮಹಿಳೆಯರು, ಡಿಜೆ ಹಾಡಿಗೆ ನೃತ್ಯ ಮಾಡಿದರು. ಪ.ಪಂ. ಅಧ್ಯಕ್ಷ ಹಾಜಿ ಚೌದ್ರಿ, ಉಪಾಧ್ಯಕ್ಷೆ ಲಕ್ಷ್ಮಿ ಆದೆಪ್ಪ ನಾಯಕ, ಟಿ.ಮಲ್ಲಿಕಾರ್ಜುನ ಗೌಡ ಬಲ್ಲಟಗಿ, ಮೌನೇಶ ಪಾಟೀಲ, ಶರಣಪ್ಪಗೌಡ ಮದ್ಲಾಪುರ, ದಾನಪ್ಪ, ರಂಜೀತ್, ರಾಮು, ಶಿವರಾಜ ಚಾಗಭಾವಿ, ರಾಮಾಚಾರಿ, ಸಮಾಜದ ಮುಖಂಡರಾದ ಭೀಮೇಶಪ್ಪ ಪೂಜಾರಿ, ಶೇಖರಪ್ಪ ರಾಠೋಡ, ಪರಮೇಶ ನಾಯ್ಕ, ಅಮರೇಶ ಪವಾರ ಮುರ್ಕಿಗುಡ್ಡ, ತೂಕಪ್ಪ ನಾಯ್ಕ, ಗೋವಿಂದ, ಪಾಂಡುರಂಗ ನಾಯ್ಕ, ಜಯರಾಮ ನಾಯ್ಕ, ಕಮಲಪ್ಪ ನಾಯ್ಕ, ಗೊನ್ನಪ್ಪ, ಜಗನಪ್ಪ, ಮೀಟಪ್ಪ, ಕೇಶಪ್ಪ, ಕೋನಪ್ಪ, ನಿವೃತ್ತ ಎಎಸ್ಐ ಚನ್ನಪ್ಪ, ಮಂಜುಳಾ, ಶ್ರೀನಿವಾಸ ನಾಯ್ಕ್, ರಾಮು ನಾಯ್ಕ, ರಾಜು ರಾಠೋಡ್, ಶಾಂತಪ್ಪ ಪವಾರ, ದೇವೇಂದ್ರ ನಾಯ್ಕ್ ಸೇರಿದಂತೆ ನೂರಾರು ಮಹಿಳೆಯರು, ಮಕ್ಕಳು, ಯುವಕರು, ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.