ADVERTISEMENT

ರಾಯಚೂರು ಜಿಲ್ಲೆಯಲ್ಲಿ ಅನಧಿಕೃತ 77 ಶಾಲೆಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 7:45 IST
Last Updated 1 ನವೆಂಬರ್ 2025, 7:45 IST
ಶಾಲೆಯೊಂದರಲ್ಲಿ ಓದುತ್ತಿರುವ ಮಕ್ಕಳು/ ಸಂಗ್ರಹ ಚಿತ್ರ
ಶಾಲೆಯೊಂದರಲ್ಲಿ ಓದುತ್ತಿರುವ ಮಕ್ಕಳು/ ಸಂಗ್ರಹ ಚಿತ್ರ   

ರಾಯಚೂರು: ಮಾನ್ಯತೆ ನವೀಕರಣ ಮಾಡಿಕೊಳ್ಳದೇ ಶಾಲಾ ಶಿಕ್ಷಣ ಇಲಾಖೆಯ ನಿಯಮಗಳನ್ನೇ ಉಲ್ಲಂಘಿಸಿ ಜಿಲ್ಲೆಯಲ್ಲಿ ನಡೆಸುತ್ತಿರುವ 77 ಶಾಲೆಗಳನ್ನು ಜಿಲ್ಲಾಡಳಿತ ಪತ್ತೆ ಮಾಡಿದೆ.

ಸಿಂಧನೂರು ತಾಲ್ಲೂಕಿನಲ್ಲಿ 24, ರಾಯಚೂರು ತಾಲ್ಲೂಕಿನಲ್ಲಿ 22, ಲಿಂಗಸುಗೂರು ತಾಲ್ಲೂಕಿನಲ್ಲಿ 11, ದೇವದುರ್ಗ ತಾಲ್ಲೂಕಿನ 4 ಶಾಲೆಗಳು, ಮಾನ್ವಿ ಹಾಗೂ ಸಿರವಾರ ತಾಲ್ಲೂಕಿನಲ್ಲಿ 16 ಶಾಲೆಗಳು ಅನಧಿಕೃತವಾಗಿ ನಡೆದಿರುವುದನ್ನು ಗುರುತಿಸಲಾಗಿದೆ.

ಜಿಲ್ಲಾಧಿಕಾರಿ ನಿತೀಶ್‌ ಅವರು ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಮಿತಿ ರಚಿಸಿ ಸಮಿತಿಗೆ ಆಯಾ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸದಸ್ಯರನ್ನಾಗಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯನ್ನು ನಿಯೋಜಿಸಿ ವರದಿ ಸಲ್ಲಿಸಲು ಆದೇಶಿಸಿದ್ದರು. ತಾಲ್ಲೂಕು ಸಮಿತಿಗಳು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ವರದಿ ಕೊಟ್ಟಿದ್ದು, ಉಪ ನಿರ್ದೇಶಕರು ಕ್ರೋಢೀಕೃತ ವರದಿಯನ್ನು ಜಿಲ್ಲಾಧಿಕಾರಿಗೆ ಒಪ್ಪಿಸಿದ್ದಾರೆ.

ADVERTISEMENT

‘ಖಾಸಗಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಹಲವು ಬಾರಿ ಕಾಲಾವಕಾಶ ನೀಡಲಾಗಿದ್ದರೂ ನಿಯಮಾನುಸಾರ ಅರ್ಜಿ ಸಲ್ಲಿಸಿಲ್ಲ. ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶ ಹಾಗೂ ಜಿಲ್ಲಾಧಿಕಾರಿ ನಿರ್ದೇಶನದಂತೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಡಿ.ಬಡಿಗೇರ ತಿಳಿಸಿದ್ದಾರೆ.

2018–2019ರಿಂದ ನಿಯಮಾವಳಿಗಳನ್ನು ಬಿಗುವುಗೊಳಿಸಲಾಗಿದೆ. ಲಿಖಿತ ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲ. ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆಗಳನ್ನು ಒದಗಿಸಬೇಕು ಹಾಗೂ ಮೌಲಸೌಕರ್ಯಗಳನ್ನು ಒದಗಿಸಿರುವ ಬಗ್ಗೆ ಸ್ಪಷ್ಟವಾಗಿ ದಾಖಲೆ ಒದಗಿಸಬೇಕು. ಕೋವಿಡ್‌ ಅವಧಿಯಲ್ಲಿ ಅನೇಕ ಶಾಲೆಗಳು ನೋಂದಣಿ ನವೀಕರಣ ಮಾಡಿಕೊಂಡಿರಲಿಲ್ಲ.

ಎಲ್ಲ 77 ಶಾಲೆಗಳು ಮೂಲತಃ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳೇ ಆಗಿವೆ. ಶಾಲೆಗಳಲ್ಲಿ ಮೂಲಸೌಕರ್ಯ ಒದಗಿಸದಿರುವುದು ಹಾಗೂ ನೋಂದಣಿ ನವೀಕರಣ ಮಾಡಿಕೊಳ್ಳದ ಕಾರಣ ಈ ಶಾಲೆಗಳನ್ನು ಶಾಲಾ ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ಪಟ್ಟಿಗೆ ಸೇರಿಸಿದೆ.

‘ಶಾಲಾ ಶಿಕ್ಷಣ ಇಲಾಖೆಯು ನೋಂದಣಿ ನವೀಕರಣಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಡಿಸೆಂಬರ್‌ ಅಂತ್ಯದವರೆಗೂ ಅವಕಾಶ ಕಲ್ಪಿಸಿದೆ. ಅನಧಿಕೃತ ಶಾಲೆಗಳ ಆಡಳಿತ ಮಂಡಳಿಗಳು ಸರ್ಕಾರದ ನಿಯಮಾವಳಿಗಳನ್ನು ಅಚ್ಚುಕಟ್ಟಾಗಿ ಪಾಲನೆ ಮಾಡುವ ಮೂಲಕ ನೋಂದಣಿ ನವೀಕರಣ ಮಾಡಿಕೊಳ್ಳಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಡಿ.ಬಡಿಗೇರ ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಯ ನಿಯಮಗಳ ಪಾಲನೆ ಮಾಡದ ಶಾಲೆಗಳ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಆಡಳಿತ ಮಂಡಳಿಗಳು ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು
ಕೆ.ಡಿ.ಬಡಿಗೇರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ

ನಿಯಮಾನುಸಾರ ಕ್ರಮಕ್ಕೆ ಸೂಚನೆ

‘ಅನಧಿಕೃತ’ ಎಂದು ಗುರುತಿಸಲಾಗಿರುವ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳ ಶೈಕ್ಷಣಿಕ ಭವಿಷ್ಯ ಕುಂಠಿತವಾಗದಂತೆ ಅಂತಹ ಶಾಲೆಗಳ ವಿರುದ್ಧ ನಿಯಮಾನುಸಾರ ಕೈಗೊಂಡ ಕ್ರಮದ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಈಗಾಗಲೇ ಸರ್ಕಾರ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಿದೆ. ಉಪ ನಿರ್ದೇಶಕರಿಂದ ಸ್ವೀಕೃತವಾಗುತ್ತಿರುವ ವರದಿ ಆಧರಿಸಿ ಅನಧಿಕೃತ ಶಾಲೆಗಳ ವಿರುದ್ಧ ನಿಯಮಾನುಸಾರ ಕ್ರಮವಹಿಸುವಂತೆ ಸಕ್ಷಮ ಪ್ರಾಧಿಕಾರಗಳಿಗೆ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.