ADVERTISEMENT

ಶಾಲೆಯ ಪ್ರವೇಶ ದ್ವಾರದಲ್ಲಿ ಮಕ್ಕಳಿಗೆ ರಂಗೋಲಿ ಸ್ವಾಗತ

ತಾಲ್ಲೂಕಿನಾದ್ಯಂತ ಶಾಲೆಗಳಲ್ಲಿ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 2:45 IST
Last Updated 26 ಅಕ್ಟೋಬರ್ 2021, 2:45 IST
ಲಿಂಗಸುಗೂರು ತಾಲ್ಲೂಕು ದೇವರಭೂಪುರದೊಡ್ಡಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕ ಕಾಳಪ್ಪ ಬಡಿಗೇರ ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿದರು
ಲಿಂಗಸುಗೂರು ತಾಲ್ಲೂಕು ದೇವರಭೂಪುರದೊಡ್ಡಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕ ಕಾಳಪ್ಪ ಬಡಿಗೇರ ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿದರು   

ಲಿಂಗಸುಗೂರು: ತಾಲ್ಲೂಕಿನಾದ್ಯಂತ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ 1 ರಿಂದ 5ನೇ ಭೌತಿಕ ತರಗತಿ ಆರಂಭಗೊಂಡಿದ್ದು, ಬಹುತೇಕ ಶಾಲೆಗಳಿಗೆ ಮಕ್ಕಳ ಹರ್ಷದಿಂದ ಆಗಮಿಸುತ್ತಿರುವ ಚಿತ್ರಣ ಕಂಡುಬಂತು.

ಸೋಮವಾರ ಶಾಲಾ ಅವಧಿಗೆ ಮುಂಚೆಯೇ ಶಾಲೆಗಳ ಮುಖ್ಯದ್ವಾರ, ತರಗತಿ ಕೊಠಡಿಗಳಿಗೆ ತಳಿರು–ತೋರಣ ಕಟ್ಟುವುದರ ಜತೆಗೆ ಪ್ರವೇಶ ದ್ವಾರದಲ್ಲಿ ರಂಗೋಲಿ ಬಿಡಿಸುವ ಮೂಲಕ ಪಾಲಕರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ಸಮೂಹ ಮಕ್ಕಳನ್ನು ಹೂ ನೀಡಿ, ಆರತಿ ಎತ್ತಿ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.

ತಾಲ್ಲೂಕಿನ ದೇವರಭೂಪುರ ದೊಡ್ಡಿಯಲ್ಲಿ ಮುಖ್ಯಶಿಕ್ಷಕ ಕಾಳಪ್ಪ ಬಡಿಗೇರ, ಗೋನವಾಟ್ಲ ತಾಂಡಾದಲ್ಲಿ ತಿಪ್ಪಣ್ಣ ರಾಠೋಡ, ಜಹಗೀರ ನಂದಿಹಾಳದಲ್ಲಿ ಅಮರೇಶ್ವರರಾವ್‍, ಹುಲಿಗುಡ್ಡದಲ್ಲಿ ಶಿವಯೋಗಿ ಗುಂಜಟಗಿ, ಪರಾಂಪುರ ತಾಂಡಾದಲ್ಲಿ ಗುರುನಗೌಡ ನೇತೃತ್ವದಲ್ಲಿ ಎಸ್‌ಡಿಎಂಸಿ ಪದಾಧಿಕಾರಿಗಳು, ಪಾಲಕರು ಮಕ್ಕಳನ್ನು ವಿಭಿನ್ನವಾಗಿ ಸ್ವಾಗತಿಸಿದರು.

ADVERTISEMENT

ಮಕ್ಕಳು ಕೂಡ ಶಾಲಾ ಸಮವಸ್ತ್ರ ಧರಿಸಿ, ಪಠ್ಯ ಪುಸ್ತಕ ಸಮೇತ ಶಿಸ್ತಿನಿಂದ ಶಾಲಾ ಆವರಣಕ್ಕೆ ಆಗಮಿಸಿದ್ದರು. ಕೊಠಡಿಗಳ ಒಳಗಡೆ ಕೋವಿಡ್‍ ನಿಯಮ ಪಾಲಿಸಿಯೇ ಮಕ್ಕಳನ್ನು ಕೂಡಿಸಿ ಸ್ಯಾನಿಟೈಸರ್‍ ಬಳಕೆ, ಅಂತರ ಕಾಯ್ದುಕೊಳ್ಳುವಿಕೆಗೆ ಆದ್ಯತೆ ನೀಡಲಾಗಿತ್ತು.

ದೇವರಭೂ ಪುರದೊಡ್ಡಿ ಮುಖ್ಯ ಶಿಕ್ಷಕ ಕಾಳಪ್ಪ ಬಡಿಗೇರ ಮಾತನಾಡಿ,‘ನಮ್ಮದು 1 ರಿಂದ 5ನೇ ತರಗತಿ ಕಿರಿಯ ಪ್ರಾಥಮಿಕ ಶಾಲೆ. 175 ಮಕ್ಕಳಿದ್ದಾರೆ. ಬಹುತೇಕ ಮಕ್ಕಳು ಆಗಮಿಸಿದ್ದು ಕೋವಿಡ್‍ ನಿಯಮ ಪಾಲಿಸಿ ಹೂ ಗುಚ್ಛ ನೀಡಿ ಸ್ವಾಗತಿಸಿದೆವು. ಮಕ್ಕಳು, ಪಾಲಕರು ಹರ್ಷದಿಂದ ಇದ್ದರು. ತಮಗೂ ಹರ್ಷವಾಗಿದೆ’ ಎಂದು ಹೇಳಿಕೊಂಡರು.

‘ಕಿರಿಯ ಪ್ರಾಥಮಿಕ ಶಾಲೆ ಆಗಿದ್ದರಿಂದ ಈವರೆಗೆ ತರಗತಿಗಳು ಆರಂಭಗೊಂಡಿರಲಿಲ್ಲ. 144 ಮಕ್ಕಳ ದಾಖಲಾತಿ ಹೊಂದಿದ ತಾಂಡಾ ಶಾಲೆ ಆರಂಭಗೊಂಡಿದ್ದು ಪಾಲಕರು ಮತ್ತು ಮಕ್ಕಳಲ್ಲಿ ಹರ್ಷ ಮೂಡಿಸಿದೆ. ತಾಂಡಾ ಜನತೆ ಮಕ್ಕಳಿಗೆ ಹೂ ನೀಡಿ, ಆರತಿ ಎತ್ತಿ ಬರಮಾಡಿಕೊಳ್ಳಲು ಸಹಕರಿಸಿದರು’ ಎಂದು ಪರಾಂಪುತಾಂಡಾದ ಶಾಲೆಯ ಮುಖ್ಯ ಶಿಕ್ಷಕ ಗುರುನಗೌಡ ಹರ್ಷ ಹಂಚಿಕೊಂಡರು.

‘ಸ್ಥಳೀಯ ಪುರಸಭೆ ವ್ಯಾಪ್ತಿ ಹುಲಿಗುಡ್ಡದಲ್ಲಿ ಕಿರಿಯ ಪ್ರಾಥಮಿಕ ಶಾಲೆ 48 ಮಕ್ಕಳ ದಾಖಲಾತಿ ಹೊಂದಿದೆ. ಕೋವಿಡ್‍ನಿಂದ ತರಗತಿ ಬಂದ್‍ ಆಗಿದ್ದವು. ಶಾಲಾ ಪುನರಾರಂಭ ಮಾಡಿದ್ದರಿಂದ ಗ್ರಾಮಸ್ಥರು ಮತ್ತು ಮಕ್ಕಳಲ್ಲಿ ಹರ್ಷ ಮೂಡಿಸಿದೆ. ಎಸ್‌ಡಿಎಂಸಿ ಪದಾಧಿಕಾರಿಗಳು ಹರ್ಷ ಹಂಚಿಕೊಂಡಿದ್ದಾರೆ’ ಎಂದು ಮುಖ್ಯ ಶಿಕ್ಷಕ ಶಿವಯೋಗಿ ಗುಂಜುಟಗಿ ಖುಷಿ ಹಂಚಿಕೊಂಡಿದ್ದಾರೆ.

‘ತಾಲ್ಲೂಕಿನಾದ್ಯಂತ ಬಹುತೇಕ ಶಾಲಾ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಮತ್ತು ಪಾಲಕರ ಸಹಕಾರದೊಂದಿಗೆ ತಳಿರು ತೋರಣದಿಂದ ಶಾಲೆಗಳನ್ನು ಅಲಂಕಾರ ಮಾಡಿದ್ದರು. ಹೂ ಗುಚ್ಛ ನೀಡಿ, ಆರತಿ ಎತ್ತಿ ಮಕ್ಕಳನ್ನು ಸ್ವಾಗತಿಸುವ ಮೂಲಕ ಶಾಲಾ ಆರಂಭಕ್ಕೆ ಮೆರಗು ನೀಡಿದ್ದರು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.