ADVERTISEMENT

ರಾಯಚೂರು | ಮಕ್ಕಳ ಗಮನ ಸೆಳೆದ ವಿಜ್ಞಾನ ಕೌತುಕ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 6:24 IST
Last Updated 8 ಫೆಬ್ರುವರಿ 2026, 6:24 IST
ರಾಯಚೂರು ನಗರದಲ್ಲಿ ಜಿಲ್ಲಾ ಉತ್ಸವದ ಅಂಗವಾಗಿ ಏರ್ಪಡಿಸಿರುವ ಡಿಜಿಟಲ್ ಸಂಚಾರಿ ತಾರಾಲಯದ ಮಳಿಗೆಗೆ ಶನಿವಾರ ಭೇಟಿ ನೀಡಿದ್ದ ಶಾಲಾ ಮಕ್ಕಳು
ರಾಯಚೂರು ನಗರದಲ್ಲಿ ಜಿಲ್ಲಾ ಉತ್ಸವದ ಅಂಗವಾಗಿ ಏರ್ಪಡಿಸಿರುವ ಡಿಜಿಟಲ್ ಸಂಚಾರಿ ತಾರಾಲಯದ ಮಳಿಗೆಗೆ ಶನಿವಾರ ಭೇಟಿ ನೀಡಿದ್ದ ಶಾಲಾ ಮಕ್ಕಳು   

ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿನ ವಿನೋದ ವಿಜ್ಞಾನ ಮಾದರಿಗಳು ಮತ್ತು ಡಿಜಿಟಲ್ ಸಂಚಾರಿ ತಾರಾಲಯದ ಪ್ರದರ್ಶನದ ಮಳಿಗೆಗಳು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು, ರಾಯಚೂರಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ.

ಈ ಮಳಿಗೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳು ಮತ್ತು ಯೋಜನೆಗಳ ಕುರಿತು ಮಾಹಿತಿ, ವಿನೋದ ವಿಜ್ಞಾನ ಮತ್ತು ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳು ಹಾಗೂ ಸಂಚಾರಿ ತಾರಾಲಯ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.

ಶನಿವಾರ ಉತ್ಸವದ ಕೊನೆಯ ದಿನವಾದ ಕಾರಣ ಈ ಮಳಿಗೆಗಳ ಡಿಜಿಟಲ್ ಸಂಚಾರಿ ತಾರಾಲಯದ ಮುಂಭಾಗದಲ್ಲಿ ಪ್ರದರ್ಶನದ ವೀಕ್ಷಣೆಗಾಗಿ ದಿನವಿಡೀ ವಿವಿಧ ಶಾಲೆಗಳ ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬಂದಿತು.

ADVERTISEMENT

‘ಡಿಜಿಟಲ್ ಸಂಚಾರಿ ತಾರಾಲಯದಲ್ಲಿ ಶಾಲಾ ಮಕ್ಕಳಿಗೆ ಒಂದು ದೊಡ್ಡ ಪರದೆಯ ಮೇಲೆ ವಿವಿಧ ಗ್ರಹಗಳು, ನಕ್ಷತ್ರಗಳು ಮತ್ತು ಇತರ ಖಗೋಳ ವಸ್ತುಗಳನ್ನು ತೋರಿಸಲಾಗುತ್ತದೆ’ ಎಂದು ಡಿಜಿಡಲ್ ಸಂಚಾರಿ ತಾರಾಲಯದ ಸಂಚಾಲಕರಾದ ಮೊಹಮ್ಮದ್ ಜುನೈದ್ ಹಾಗೂ ಮಹಾದೇವ ತಿಳಿಸಿದರು.

‘ತಾರಾಲಯದಲ್ಲಿ ಸೌರವ್ಯೂಹ, ನಕ್ಷತ್ರಗಳ ದೃಶ್ಯಗಳ ವೀಕ್ಷಣೆ ಹೆಚ್ಚು ಕುತೂಹಲ ಮೂಡಿಸಿದವು’ ಎಂದು 6ನೇ ತರಗತಿ ವಿದ್ಯಾರ್ಥಿಗಳಾದ ಶಿವರಾಜ, ಪ್ರಕಾಶ ತಿಳಿಸಿದರು.

‘ಸಂಚಾರಿ ತಾರಾಲಯದಲ್ಲಿನ ವೀಕ್ಷಣೆ ಮಕ್ಕಳ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ. ಮಕ್ಕಳಲ್ಲಿ ವಿಜ್ಞಾನ ಹಾಗೂ ಖಗೋಳಶಾಸ್ತ್ರದ ಕುರಿತು ಕುತೂಹಲ, ಹೆಚ್ಚಿನ ಆಸಕ್ತಿ ಮೂಡಿಸುತ್ತದೆ’ ಎಂದು ರಾಯಚೂರಿನ ಶಿಕ್ಷಕ ಶ್ರೀಧರ್ ತಿಳಿಸಿದರು.

‘ಉತ್ಸವದ ಮೂರು ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಈ ವಿಜ್ಞಾನ ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಿಸಿದ್ದಾರೆ’ ಎಂದು ರಾಯಚೂರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧಿಕಾರಿ ಅಜಿತ್ ಕುಮಾರ ಹೇಳಿದರು.

‘ಜಿಲ್ಲಾ ಉತ್ಸವದಲ್ಲಿ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಪುಸ್ತಕಗಳ ಮಾರಾಟ ಹಾಗೂ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಅವಕಾಶ ನೀಡಿರುವುದು ಶ್ಲಾಘನೀಯ’ ಎಂದು ಪಾಲಕರಾದ ರಮೇಶ ತಡಕಲ್ ಹಾಗೂ ಬಸವರಾಜ ಚ್ಯಾಗಿ ಅಭಿಪ್ರಾಯಪಟ್ಟರು.

ವಿನೋದ ವಿಜ್ಞಾನದ ಮಾದರಿಗಳನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಮಕ್ಕಳು ಮತ್ತು ಸಾರ್ವಜನಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.