ADVERTISEMENT

ನಡೆಯದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸಭೆ; ಸಾಧಕರ ಆಯ್ಕೆ ಮಾಡಲು ಆಗ್ರಹ

ಬಾವಸಲಿ
Published 14 ಅಕ್ಟೋಬರ್ 2023, 22:30 IST
Last Updated 14 ಅಕ್ಟೋಬರ್ 2023, 22:30 IST
   

ರಾಯಚೂರು: ನ.1ರಂದು ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುತ್ತಿದ್ದ ಜಿಲ್ಲಾ ಮಟ್ಟದ ಪ್ರಶಸ್ತಿ ಸ್ಥಗಿತಗೊಳಿಸಿರುವುದು ಕಲಾವಿದರ, ಸಾಹಿತಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿ ವರ್ಷ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವುದು ವಾಡಿಕೆ. ಕಲೆ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ, ಪತ್ರಿಕೋದ್ಯಮ, ರಂಗಭೂಮಿ, ಶಿಕ್ಷಣ, ಕ್ರೀಡೆ ಹೀಗೆ ಬೇರೆ ಬೇರೆ ಕ್ಷೇತ್ರಗಳ 10ರಿಂದ 20 ಸಾಧಕರನ್ನು ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಲಾಗುತ್ತಿತ್ತು. ಐದು ವರ್ಷಗಳ ಹಿಂದೆ ಸ್ಥಗಿತಗೊಂಡ ಪ್ರಶಸ್ತಿ ಪ್ರದಾನ ಮತ್ತೆ ಆರಂಭವಾಗಿಲ್ಲ.

ಸಾಮಾನ್ಯವಾಗಿ ಆಯ್ಕೆ ಸಮಿತಿಗೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ, ಕಲಾವಿದರ ಸಂಘದ ಅಧ್ಯಕ್ಷ, ಶಿಕ್ಷಣ ತಜ್ಞರು, ಸಂಘ ಸಂಸ್ಥೆಗಳ ಅಧ್ಯಕ್ಷರು ಸಮಿತಿಗೆ ಸದಸ್ಯರಾಗಿರುತ್ತಾರೆ.

ADVERTISEMENT

ಪ್ರಶಸ್ತಿಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಆಯ್ಕೆ ಸಮಿತಿ ಸಭೆಯಲ್ಲಿ ಇಟ್ಟು ಒಪ್ಪಿಗೆ ಪಡೆಯಲಾಗುತ್ತದೆ. ದಾಖಲೆಗಳ ಆಧಾರದ ಮೇಲೆ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ನಂತರ ಜಿಲ್ಲಾಧಿಕಾರಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಕಾರಣಾಂತರಗಳಿಂದ ಸ್ಥಗಿತಗೊಂಡ ಪಶಸ್ತಿ ಪ್ರದಾನ ಮತ್ತೆ ಶುರುವಾಗಿಲ್ಲ. ಹಿಂದೆ ಇದ್ದ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿತ್ತು. ಆದರೆ, ಯಾರೊಬ್ಬರೂ ಮನಸ್ಸು ಮಾಡಲಿಲ್ಲ.

ಜಿಲ್ಲಾಡಳಿತ ಕಲಾವಿದರನ್ನು ಮೂಲೆಗುಂಪು ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ರಂಗ ಮಂದಿರ ಬಾಗಿಲು ಮುಚ್ಚಿ ಒಂದು ವರ್ಷ ಕಳೆದಿದೆ. ಕಲಾವಿದರು ಕಾರ್ಯಕ್ರಮಗಳನ್ನು ನೀಡಲು ಅಚ್ಚುಕಟ್ಟಾದ ಸ್ಥಳ ಇಲ್ಲ. ಖಾಸಗಿ ಕಲ್ಯಾಣ ಮಂಟಪಗಳು ಸಾವಿರಾರು ರೂಪಾಯಿ ಬಾಡಿಗೆ ಪಡೆಯುವ ಕಾರಣ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕಡಿಮೆಯಾಗಿವೆ.

ಜಿಲ್ಲೆಯಲ್ಲಿ ಅನೇಕ ಸಾಧಕರು ಎಲೆಮರೆಕಾಯಿಯಂತೆ ಇದ್ದಾರೆ. ಕಲಾವಿದರು, ರಂಗಭೂಮಿ, ಸಾಮಾಜ ಸೇವೆ, ವೈದ್ಯಕೀಯ, ಸಾಹಿತ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಇದ್ದಾರೆ. ಜಿಲ್ಲಾಡಳಿತ ಅಂಥವರನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಕಲಾವಿದರು ಒತ್ತಾಯಿಸಿದ್ದಾರೆ.

‘ಜಿಲ್ಲೆಯ 7 ತಾಲ್ಲೂಕುಗಳಿಂದ ತಲಾ 4 ರಂತೆ ಗರಿಷ್ಟ 30 ಜನರಿಗೆ ಆಯ್ಕೆ ಮಾಡಬೇಕು. ಕೆಲವರ ಗುಂಪುಗಾರಿಕೆ, ವೈಮನಸ್ಸಿನಿಂದ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡುವುದು ನಿಲ್ಲಿಸಿದ್ದು ಸರಿಯಲ್ಲ. ‘ಎಡದೊರೆ ನಾಡು ಪ್ರಶಸ್ತಿ’ ಹೆಸರಿನಲ್ಲಿ ಒಬ್ಬರಿಗೆ ಮಾತ್ರ ನೀಡಿ ಮೂಗಿಗಿ ತುಪ್ಪ ಸವರುವ ಕೆಲಸ ಮಾಡಿದ್ದಾರೆ’ ಎಂದು ಕಲಾವಿದ ಮಾರುತಿ ಬಡಿಗೇರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.