ADVERTISEMENT

ಕಲಬುರಗಿ: ಒಂದು ಸಂವಾದ... ನೂರು ಹಾಡು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 6:36 IST
Last Updated 23 ಫೆಬ್ರುವರಿ 2026, 6:36 IST
ಕಲಬುರಗಿ ನಾಟಕೋತ್ಸವದ ಭಾಗವಾಗಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ‘ಕಂಪನಿ ನಾಟಕಗಳು; ಪ್ರಸ್ತುತಿ ಮತ್ತ ಪರಂಪರೆ’ ಕುರಿತ ಸಂವಾದದಲ್ಲಿ ಹಿರಿಯ ರಂಗಕರ್ಮಿ ಬಿ.ಜಯಶ್ರೀ ಮಾತನಾಡಿದರು 
ಕಲಬುರಗಿ ನಾಟಕೋತ್ಸವದ ಭಾಗವಾಗಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ‘ಕಂಪನಿ ನಾಟಕಗಳು; ಪ್ರಸ್ತುತಿ ಮತ್ತ ಪರಂಪರೆ’ ಕುರಿತ ಸಂವಾದದಲ್ಲಿ ಹಿರಿಯ ರಂಗಕರ್ಮಿ ಬಿ.ಜಯಶ್ರೀ ಮಾತನಾಡಿದರು    

ಕಲಬುರಗಿ: ರಂಗಿಗೀತೆ, ಲಾವಣಿ, ಕೀರ್ತನೆ, ಕಂದ... ಕಲಬುರಗಿ ನಾಟಕೋತ್ಸವದ ಭಾಗವಾಗಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ‘ಕಂಪನಿ ನಾಟಕಗಳು; ಪ್ರಸ್ತುತಿ ಮತ್ತ ಪರಂಪರೆ’ ಕುರಿತ ಸಂವಾದದಲ್ಲಿ ಹಿರಿಯ ರಂಗಕರ್ಮಿ ಬಿ.ಜಯಶ್ರೀ ಮತ್ತು ಸಂಗಡಿಗರ ಕಂಠದಿಂದ ಬಂದ ಹಾಡುಗಳು ಕಂಪನ ಸೃಷ್ಟಿಸಿದವು.

ವಿಷಯವನ್ನು ಹೇಳುತ್ತಾ ಅದಕ್ಕೆ ತಕ್ಕ ಹಾಡು, ರಾಗ ಹೇಳುವ ಜಯಶ್ರೀ ಮತ್ತು ಸಂಗಡಿಗರ ಕಂಚಿನ ಕಂಠಕ್ಕೆ ಎದುರು ಕುಳಿತ ಪ್ರತಿಯೊಬ್ಬರೂ ಚಪ್ಪಾಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಸೇರಿದ್ದ ಬೆರಳಣಿಕೆಯಷ್ಟು ಮಂದಿಯಲ್ಲಿ ಹಾಡುಗಳಲ್ಲಿನ ರಾಗ, ಭಾವ, ತಾಳಕ್ಕೆ ಕೆಲವರು ಕಣ್ಮುಮುಚ್ಚಿ ತಲೆದೂಗುತ್ತಿದ್ದರೆ, ಇನ್ನೂ ಕೆಲವರು ಕುಳಿತ ಕುರ್ಚಿಯ ಹಿಡಿಕೆ ಮೇಲೆಯೇ ಹಾರ್ಮೋನಿಯಂ ನುಡಿಸಿದಂತೆ ಬೆರಳುಗಳನ್ನು ಆಡಿಸಿದರು. ಹಲವರು ತಮ್ಮ ತೊಡೆಯನ್ನೇ ತಬಲಾ ಮಾಡಿಕೊಂಡಿದ್ದರು.

‘ನಾಟಕಕ್ಕೆ ರಂಗಗೀತೆ ಒಡವೆ ಇದ್ದ ಹಾಗೆ’ ಎಂದ ಜಯಶ್ರೀ ಅವರು, ‘ಕಂಪನಿಗಳಿಗೂ ಮುನ್ನ ಬ್ರಿಟಿಷರು ಇದ್ದಾಗ ಅವರ ಮನರಂಜನೆಗಾಗಿ ಕ್ಲಬ್‌ಗಳು ಇದ್ದವು. ಆಗ ಪಾರ್ಸಿ ಥಿಯೇಟರ್‌ ಹುಟ್ಟಿತು. ಅದೇ ಕಾಲದಲ್ಲಿ ಹಳ್ಳಿಗಳಲ್ಲೂ ನಾಟಕಗಳು ನಡೆಯುತ್ತಿದ್ದವು. ಪಾರ್ಸಿ ಥಿಯೇಟರ್‌ ಪರಿಣಾಮದಿಂದ ಹಳ್ಳಿ ನಾಟಕಗಳಲ್ಲಿ ಪರದೆ, ಪಾತ್ರಧಾರಿಗಳಿಗೆ ವೇಷಭೂಷಣಗಳು ಬಂದವು’ ಎಂದು ಹೇಳಿದರು.‌

‘ಮಹಾಭಾರತ, ರಾಮಾಯಣ ಆಧಾರಿತ ನಾಟಕಗಳಲ್ಲಿನ ಕೀರ್ತನೆಗಳನ್ನು ರೂಪಾಂತರ ಮಾಡಿ ಅಳವಡಿಸಿಕೊಳ್ಳಲಾಯಿತು. ಕಂದ ಪದ್ಯವನ್ನು ಬದಲಾಯಿಸಲು ಬರುವುದಿಲ್ಲ. ಬ್ರಿಟಿಷರು ನಾಟಕಗಳಲ್ಲಿ ಲಾವಣಿಗಳನ್ನು ಬ್ಯಾನ್‌ ಮಾಡಿದ ಬಳಿಕ ಕಂಪನಿಗಳು ರಾವಣ, ಕಂಸನಂತಹ ಖಳ ನಟನ ಪಾತ್ರಗಳನ್ನೇ ಬ್ರಿಟಿಷರಿಗೆ ಹೋಲಿಸಿ ಹಾಡು ಕಟ್ಟಿದರು’ ಎಂದ ಅವರು, ನಾಟಕವೊಂದರ ಹಾಡನ್ನು ತಮ್ಮ ಸಂಗಡಿಗರೊಂದಿಗೆ ಪ್ರಸ್ತುತ ಪಡಿಸಿದರು.

ADVERTISEMENT

ಕೊನೆ ಕ್ಷಣದಲ್ಲಿ ಸ್ಥಳ ಬದಲು

ನಾಟಕೋತ್ಸವದ ಪ್ರಚಾರ ಪ್ರಕಟಣೆ ಪತ್ರಕರ್ತಕರಿಗೆ ಕೊಟ್ಟ ಮಾಹಿತಿಯಲ್ಲೂ ಕನ್ನಡ ಭವನದಲ್ಲಿ ಫೆ.22 ರಂದು(ಭಾನುವಾರ) 11 ಗಂಟೆಗೆ ಸಂವಾದ ನಡೆಯುತ್ತದೆ ಎಂದು ಇತ್ತು. ಕನ್ನಡ ಭವನದ ವೇದಿಕೆ ಮೇಲೆ ಸಂವಾದದ ಬ್ಯಾನರ್‌ ಹಾಕಲಾಗಿತ್ತು.

12 ಗಂಟೆಗೆ ಕನ್ನಡ ಭವನದಲ್ಲಿ ಬೇರೆ ಕಾರ್ಯಕ್ರಮ ಶುರುವಾದಾಗ ಪ್ರಕರ್ತರು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳನ್ನು ವಿಚಾರಿಸಿದಾಗ ಸ್ಥಳ ಬದಲಾದ ಬಗ್ಗೆ ಗೊತ್ತಾಯಿತು. ಬದಲಾದ ಸ್ಥಳ ಯಾವುದು ಎನ್ನುವ ಬಗ್ಗೆ ಅವರಿಗೂ ಗೊತ್ತಿರಲಿಲ್ಲ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಂವಾದದ ಆರಂಭದಲ್ಲಿ ನಿರೂಪಿಸಿದ ವ್ಯಕ್ತಿಯೊಬ್ಬರು ಕನ್ನಡ ಭವನಕ್ಕೆ ಬಂದು ಮರಳಿ ಹೋಗಿದ್ದರು. ಸ್ಥಳ ಬದಲಾದ ಬಗ್ಗೆ ಪ್ರಮುಖರೊಬ್ಬರನ್ನು ವಿಚಾರಿಸಿದಾಗ ‘ಆಹ್ವಾನಿತರಿಗೆ ಮಾಹಿತಿ ನೀಡಿದ್ದೇವೆ’ ಎಂದರು. 11 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ 12.45ಕ್ಕೆ ಶುರುವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.