ADVERTISEMENT

ಶಾರ್ಟ್‌ ಸರ್ಕಿಟ್‌: ಐದು ಫೀಡರ್‌ಗೆ ಹಾನಿ

ಕೆಪಿಟಿಸಿಎಲ್‌ಗೆ ₹ 30 ಲಕ್ಷ ನಷ್ಟ; ಕಗ್ಗತ್ತಲಲ್ಲಿ ಐದಾರು ಗ್ರಾಮಗಳು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 15:16 IST
Last Updated 28 ನವೆಂಬರ್ 2019, 15:16 IST
ಲಿಂಗಸುಗೂರಲ್ಲಿ ಸೋಮವಾರ 220 ಕೆವಿ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ವಿದ್ಯುತ್‌ ಅವಘಡದಿಂದ ಸಂಪೂರ್ಣ ಸುಟ್ಟಿರುವ ಫೀಡರ್‌
ಲಿಂಗಸುಗೂರಲ್ಲಿ ಸೋಮವಾರ 220 ಕೆವಿ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ವಿದ್ಯುತ್‌ ಅವಘಡದಿಂದ ಸಂಪೂರ್ಣ ಸುಟ್ಟಿರುವ ಫೀಡರ್‌   

ಲಿಂಗಸುಗೂರು: ಸ್ಥಳೀಯ 220 ಕೆವಿ ವಿದ್ಯುತ್‌ ಪ್ರಸರಣ ವಿತರಣಾ ಕೇಂದ್ರದ 110/11ಕೆವಿ ಬ್ಯಾಂಕ್‌ (ಬಸ್‌), 5 ಫೀಡರ್‌ಗಳು ಸೋಮವಾರ ಸಂಭವಿಸಿದ ವಿದ್ಯುತ್‌ ಅವಘಡದಲ್ಲಿ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಅಹೋರಾತ್ರಿ ಪರದಾಡುವಂತಾಗಿದೆ.

110/11ಕೆವಿ ಬ್ಯಾಂಕ್‌ (ಬಸ್‌) ಮೂಲಕ ಲಿಂಗಸುಗೂರು ಪಟ್ಟಣ, ಕರಡಕಲ್ಲ, ಕಾಳಾಪುರ (ನಿರಂತರ ಜ್ಯೋತಿ), ಗುಂತಗೋಳ (ಐಪಿ ಸೆಟ್‌) ಮತ್ತು ಶಾಶ್ವತ ಕುಡಿವ ನೀರಿನ ಯೋಜನೆ ಲಿಂಗಸುಗೂರು ಫೀಡರ್‌ಗಳು ಸಂಪೂರ್ಣ ಭಸ್ಮವಾಗಿದ್ದರಿಂದ ಫೀಡರ್‌ ವ್ಯಾಪ್ತಿ ಗ್ರಾಮಗಳಿಗೂ ಕೂಡ ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡಿದೆ.

ವಿದ್ಯುತ್‌ ಪ್ರಸರಣ ವಿತರಣಾ ಕೇಂದ್ರದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ವಿಷ್ಣು ಗುಡಸಲಿ ಮಾತನಾಡಿ, ‘ವಿದ್ಯುತ್‌ ಶಾರ್ಟ್‌ ಸರ್ಕಿಟ್‌ದಿಂದ ಫೀಡರ್‌ಗಳಿಗೆ ನೇರ ಸಂಪರ್ಕ ಕಲ್ಪಿಸುವ ಬಸ್‌ (ಬ್ಯಾಂಕ್‌) ಬಳಿ ಬೆಂಕಿ ಕಾಣಿಸಿಕೊಂಡು ಕೇಂದ್ರದಲ್ಲಿನ ಬೆಂಕಿ ನಂದಿಸುವ ಉಪಕರಣಗಳ ಬಳಕೆ ಮಾಡಿದರು ನಿಯಂತ್ರಣ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳ ಆಗಮಿಸಿ ನಿಯಂತ್ರಣಕ್ಕೆ ತಂದಿತು’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಈ ಕುರಿತು ವಿದ್ಯುತ್‌ ಪ್ರಸರಣ ವಿತರಣಾ ಕೇಂದ್ರದ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಎ.ಮಧೂಸೂಧನ ಅವರನ್ನು ಸಂಪರ್ಕಿಸಿದಾಗ, ‘220 ಕೆವಿ ಕೇಂದ್ರದಲ್ಲಿ 110/11ಕೆವಿ ಬ್ಯಾಂಕ್‌ ಮತ್ತು ಫೀಡರ್‌ಗಳು ಶಾರ್ಟ್‌ ಸರ್ಕಿಟ್‌ದಿಂದ ಸುಟ್ಟು ₹ 30 ರಿಂದ ₹ 35 ಲಕ್ಷ ನಷ್ಟವಾಗಿದೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಹತ್ತು ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ’ ಎಂದರು.

ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬೆನ್ನಪ್ಪ ಕರಿ ಬಂಟನಾಳ ಮಾತನಾಡಿ, ‘220ಕೆವಿ ಕೇಂದ್ರದ ಆಕಸ್ಮಿಕ ಬೆಂಕಿ ಅವಘಡದಿಂದ ಗ್ರಾಹಕರಿಗೆ ತಾತ್ಕಾಲಿಕ ತೊಂದರೆ ಆಗಿರುವುದು ನಿಜ. ಇರುವ ವ್ಯವಸ್ಥೆಯನ್ನು ಬಳಸಿಕೊಂಡು ಗ್ರಾಹಕರಿಗೆ ತೊಂದರೆ ಆಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಆದಾಗ್ಯೂ ಕೂಡ ತೊಂದರೆ ಆಗಲಿದ್ದು ಗ್ರಾಹಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.