
ದೇವದುರ್ಗ: ತಾಲ್ಲೂಕಿನ ತಿಂಥಿಣಿ ಬ್ರಿಡ್ಜ್ ಕನಕಗುರು ಪೀಠದ ಸಿದ್ದರಾಮನಂದಪುರಿ ಸ್ವಾಮೀಜಿ ಅಂತ್ಯ ಸಂಸ್ಕಾರವು ಗುರುವಾರ ಧರ್ಮಗುರುಗಳು, ಅಪಾರ ಭಕ್ತ ಸಮೂಹದ ಸಮ್ಮುಖದಲ್ಲಿ ಗುರುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದ ಸಿದ್ದರಾಮನಂದಪುರಿ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಸಿದ್ದರಾಮನಂದಪುರಿ ಸ್ವಾಮೀಜಿ ಅವರಿಗೆ ಗುರುವಾರ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡ ತಕ್ಷಣ ಲಿಂಗಸೂಗೂರು ಆಸ್ಪತ್ರೆಗೆ ಒಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರು ಎಳೆದಿದ್ದರು. ಸ್ವಾಮೀಜಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಭಾರಿ ಸಂಖ್ಯೆಯಲ್ಲಿ ಭಕ್ತರು ಮಠದ ಆವರಣದಲ್ಲಿ ಜಮಾಯಿಸಿದರು.
ಜಿಲ್ಲಾಡಳಿತ ಅಂತ್ಯ ಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಿತು. ಭಕ್ತರ ಅನುಕೂಲಕ್ಕಾಗಿ ದೊಡ್ಡ ಶಾಮಿಯಾನಾ ಹಾಕಲಾಗಿತ್ತು. ಪೊಲೀಸ್ ಬ್ಯಾಂಡ್ ನುಡಿಸಿ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ವಿವಿಧೆಡೆ ಬಂದಿದ್ದ ಸ್ವಾಮೀಜಿಗಳ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಹಾಲುಮತ ಸಮಾಜದ ವಿಧಿ ವಿಧಾನದಂತೆ ತಿಂಥಣಿ ಬ್ರಿಡ್ಜ್ ಕನಕ ಗುರು ಪೀಠದ ಆವರಣದಲ್ಲಿ ಸ್ವಾಮೀಜಿ ಅಂತ್ಯಕ್ರಿಯೆ ನೆರವೇರಿತು.
ಸರ್ಕಾರದ ಪ್ರತಿನಿಧಿಗಳಾಗಿ ವೈದ್ಯಕೀಯ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ ಪಾಟೀಲ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಣ್ಣ ನೀರಾವರಿ ಸಚಿವ ಸಚಿವ ಎನ್.ಎಸ್.ಬೋಸರಾಜ, ರಾಜ್ಯ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕಿ ಕರೆಮ್ಮ ಜಿ ನಾಯಕ, ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್, ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ನಿತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಕ್ಷು ಗಿರಿ, ಮಾಜಿ ಸಚಿವರಾದ ಶ್ರೀರಾಮುಲು, ಕೆ. ಶಿವನಗೌಡ ನಾಯಕ, ಬಂಡೆಪ್ಪ ಕಾಶಂಪುರ ಸೇರಿದಂತೆ ವಿವಿಧ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯದ ವಿವಿಧ ಸಮಾಜದ ಮಠಾಧೀಶರು, ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು.
ಭಾವುಕರಾದ ಭಕ್ತರು
ಕಳೆದ ಮೂರು ದಿನಗಳ ಕಾಲ (ಜನವರಿ 12, 13 ಮತ್ತು 14) ಹಾಲುಮತ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಕುರುಬ ಸಮುದಾಯದ ವೈವಿಧ್ಯಮಯ ಸಂಪ್ರದಾಯಗಳು, ಅನೇಕ ಸಾಧಕರ ಜೀವನ ಪಥಗಳನ್ನು ನಾಡಿಗೆ ಪರಿಚಯಿಸಿ ಲಕ್ಷಾಂತರ ಭಕ್ತರ ಮನಸ್ಸುಗಳನ್ನು ಗೆದ್ದಿದ್ದ ಶ್ರೀಗಳ ಮಠದ ಆವರಣದಲ್ಲಿ ಮೌನ ಆವರಿಸಿದರು.
ಭಕ್ತರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಭಾವುಕರಾದರು. ಶೈಕ್ಷಣಿಕವಾಗಿ ಸಮುದಾಯವನ್ನು ಅಭಿವೃದ್ಧಿಗೊಳಿಸಲು ಶಾಲೆ, ಕಾಲೇಜು, ವಿದ್ಯಾರ್ಥಿನಿಲಯಗಳನ್ನು ಆರಂಭಿಸಿದೆ. ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿಯಲ್ಲಿ ನಾಲ್ಕು ಶಾಖಾ ಮಠಗಳನ್ನು ಸ್ಥಾಪಿಸಿಲು ಶೀಗಳು ಶ್ರಮಿಸಿದ್ದರು.
ರಾಜಕಾರಣಿಗಳನ್ನು ನೇರ ನಿಷ್ಟುರವಾಗಿ ಟೀಕಿಸುತ್ತ ಸದಾ ಜನಪರ ಆಲೋಚನೆ ಮಾಡುತ್ತಿದ್ದ ಶ್ರೀಗಳ ಸಾವು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆಬೈರತಿ ಸುರೇಶ್ ನಗರಾಭಿವೃದ್ಧಿ ಸಚಿವ
ಸರ್ವ ಸಮುದಾಯದ ಪರ ಕಾಳಜಿ ಹೊಂದಿದ್ದರು. ಭೂ ವಿವಾದ ಧೈರ್ಯದಿಂದ ಎದುರಿಸಿದ್ದರು. ಮೂರು ದಿನದಿಂದ ಸಂಭ್ರಮದ ಕಾರ್ಯಕ್ರಮ ನಡೆಸಿ ವಿಧಿವಶವಾದರುನಿರಂಜನಾನಂದಪುರಿ ಸ್ವಾಮೀಜಿ ಕಾಗಿನೆಲೆ ಗುರು ಪೀಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.