ADVERTISEMENT

ರಾಯಚೂರು: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 7:33 IST
Last Updated 6 ಜುಲೈ 2025, 7:33 IST
ರಾಯಚೂರಿನಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು    

ರಾಯಚೂರು: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ದ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಾರ್ಥನೆಯ ಬಳಿಕ ಮುಸ್ಲಿಂ ಸಮುದಾಯದ ಮುಖಂಡರು ಇಲ್ಲಿಯ ಎಲ್ಲ ಮಸೀದಿಗಳ ಮುಂದೆ ಮಾನವ ಸರಪಳಿ‌ ನಿರ್ಮಿಸಿ ಮೌನ ಪ್ರತಿಭಟನೆ ನಡೆಸಿದರು.

ಮುಸ್ಲಿಂ ಸಮುದಾಯದ ಮುಖಂಡ ರಝಾಕ್ ಉಸ್ತಾದ್ ಮಾತನಾಡಿ,‘ಕೇಂದ್ರ ಸರ್ಕಾರ ವಕ್ಫ್ ಆಸ್ತಿಗಳನ್ನು ರಕ್ಷಣೆ ಮಾಡುವ ಬದಲು ಅಕ್ರಮ ಒತ್ತುವರಿದಾರರ ಪರವಾಗಿ ಕಾನೂನು ತಿದ್ದುಪಡಿ ತರುತ್ತಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದನ್ನು ವಿರೋಧಿಸಿ ದೇಶದ ಎಲ್ಲ ಭಾಗಗಳಲ್ಲಿ ವಿವಿಧ ಹಂತಗಳಲ್ಲಿ ಕಾನೂನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕರೆ ನೀಡಿದೆ. ಅಸಂವಿಧಾನಿಕವಾಗಿರುವ ವಕ್ಫ್ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಒಂದು‌ ಕಡೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕಾನೂನು ಹೋರಾಟ ನಡೆಸುತ್ತಿದೆ. ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದೆ. ಸುಪ್ರೀಂ ಕೋರ್ಟ್ ಸರ್ಕಾರ ತಿದ್ದುಪಡಿ ಮಾಡಲಾದ ಅಂಶಗಳಲ್ಲಿ ಮೂರು ಅಂಶಗಳ ಜಾರಿಗೆ ತಡೆಯಾಜ್ಞೆ ನೀಡಿದೆ. ಇನ್ನುಳಿದ ಅಂಶಗಳ ಕುರಿತು ಚರ್ಚೆ ನಡೆಯುತ್ತಿದೆ’ ಎಂದು ಹೇಳಿದರು.

‘ವಕ್ಫ್ ತಿದ್ದುಪಡಿ ಕಾಯ್ದೆ-2025 ಜಾರಿಯ ನಂತರ ದೇಶದಲ್ಲಿ ವಕ್ಫ್ ಆಸ್ತಿಗಳ ರಕ್ಷಣೆ ಕಷ್ಟವಾಗುತ್ತದೆ. ಕೇಂದ್ರ ಸರ್ಕಾರ ವಕ್ಫ್ ಆಸ್ತಿಗಳನ್ನು ಬಳಸಿ ಅರಾಜಕತೆ ಸೃಷ್ಟಿಗೆ ದಾರಿ ಮಾಡಿಕೊಡಲು ಮುಂದಾಗಿದೆ’ ಎಂದು ಆರೋಪಿಸಿದರು.

ಮುಖಂಡರಾದ ಆಸಿಮುದ್ದೀನ್ ಅಕ್ತರ್, ಮೊಹಮ್ಮದ್ ಉಸ್ಮಾನ್, ಏಜಾಜ್ ಅಲಿ, ಸೈಯದ್ ಅಮಿನುಲ್‌ ಹಸನ್, ಅಕ್ತರ್ ಹುಸೇನ್, ಶೇಖ್ ಮಾಸೂಮ್, ಮೌಲಾನಾ ಜಮೀಲ್ ಸಿರಾಜಿ, ಜಹೀರುದ್ದೀನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.