ADVERTISEMENT

ಸಿಂಧನೂರು ಜಿಲ್ಲಾ ಕೇಂದ್ರ|ಡಿಸಿಎಂ ಬಳಿ ಪಕ್ಷಾತೀತ ನಿಯೋಗ ತೆರಳೋಣ:ಬಸನಗೌಡ ಬಾದರ್ಲಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 5:37 IST
Last Updated 19 ಜನವರಿ 2026, 5:37 IST
ಸಿಂಧನೂರಿನ ಟೌನ್‍ಹಾನ್‍ನಲ್ಲಿ ನವ ಸಂಕಲ್ಪ ನವ ಸಿಂಧನೂರು ಘೋಷವಾಕ್ಯದಲ್ಲಿ ಸಿಂಧನೂರು ಜಿಲ್ಲಾ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯನ್ನು ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿ ಉದ್ಘಾಟಿಸಿದರು
ಸಿಂಧನೂರಿನ ಟೌನ್‍ಹಾನ್‍ನಲ್ಲಿ ನವ ಸಂಕಲ್ಪ ನವ ಸಿಂಧನೂರು ಘೋಷವಾಕ್ಯದಲ್ಲಿ ಸಿಂಧನೂರು ಜಿಲ್ಲಾ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯನ್ನು ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿ ಉದ್ಘಾಟಿಸಿದರು   

ಸಿಂಧನೂರು: ‘ಸಿಂಧನೂರು ಜಿಲ್ಲಾ ಕೇಂದ್ರವನ್ನಾಗಿಸುವುದು ನನ್ನ ಗುರಿಯಾಗಿದೆ. ಅದಕ್ಕಾಗಿ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಡಿಸಿಎಂ ಡಿ.ಕೆ. ಶಿವಕುಮಾರ ಭೇಟಿಯಾಗಲು ಸಮಯ ಕೇಳುತ್ತೇನೆ. ಪಕ್ಷಾತೀತವಾಗಿ ನಿಯೋಗ ತೆರಳಿ ಸಿಂಧನೂರು ಜಿಲ್ಲೆ ಮಾಡಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸೋಣ’ ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಹೇಳಿದರು.

ಇಲ್ಲಿನ ಟೌನ್‍ಹಾನ್‍ನಲ್ಲಿ ‘ನವ ಸಂಕಲ್ಪ, ನವ ಸಿಂಧನೂರು’ ಘೋಷವಾಕ್ಯದಲ್ಲಿ ಸಿಂಧನೂರು ಜಿಲ್ಲಾ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷಗಳು ಗತಿಸಿದರೂ ಇದುವರೆಗೂ ಸಿಂಧನೂರು ತಾಲ್ಲೂಕಿನಲ್ಲಿ ಐಟಿಐ, ಡಿಪ್ಲೋಮಾ, ಎಂಜನಿಯರಿಂಗ್, ಮೆಡಿಕಲ್, ಪ್ಯಾರಾ ಮೆಡಿಕಲ್, ಕಾನೂನು ಮತ್ತು ಎಂಬಿಎ ಕಾಲೇಜು ಮಂಜೂರಾಗಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವುದೇ ಕಾರಣ. ಉನ್ನತ ಶಿಕ್ಷಣಕ್ಕಾಗಿ ಹೆತ್ತ ತಂದೆ-ತಾಯಿ ಮತ್ತು ಊರು ಬಿಟ್ಟ ಹೋಗಬೇಕಾಗಿದೆ. ಇದರಿಂದ ಭಾವನಾತ್ಮಕ ಸಂಬಂಧ ಕಡಿಮೆಯಾಗುತ್ತಿದೆ. ಶಿಕ್ಷಣ ಮುಗಿಸಿಕೊಂಡು ಬಂದರೆ ಉದ್ಯೋಗ ಇಲ್ಲದೆ ಪರಿತಪಿಸುವಂತಹ ಪರಿಸ್ಥಿತಿಯಿದೆ. ತಾಲ್ಲೂಕಿನಲ್ಲಿ ಉದ್ಯೋಗ ಸೃಷ್ಠಿಸುವ ಕೈಗಾರಿಕೆಗಳೇ ಇಲ್ಲ. ಈ ಕಾರ್ಯಗಳು ಬರಬೇಕಾದರೆ ಸಿಂಧನೂರು ಜಿಲ್ಲಾ ಕೇಂದ್ರವಾದರೆ ಸಾಧ್ಯವಾಗಲಿದೆ’ ಎಂದು ಹೇಳಿದರು.

ADVERTISEMENT

‘ಇಂತಹ ಅನೇಕ ಸಮಸ್ಯೆಗಳು ಮತ್ತು ಸವಾಲುಗಳ ನಡುವೆ ಸಿಂಧನೂರು ಜಿಲ್ಲೆ ಮಾಡಬೇಕಾಗಿದೆ. ಶಿಕ್ಷಣ, ಆರೋಗ್ಯ, ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವ ಜೊತೆಗೆ ಸಿಂಧನೂರು ಜಿಲ್ಲೆಯನ್ನಾಗಿಸಲು ವಿಧಾನ ಪರಿಷತ್ ಅಧಿವೇಶನದಲ್ಲಿ ಮೊಟ್ಟಮೊದಲ ಬಾರಿ ಧ್ವನಿಯೆತ್ತುವ ಮೂಲಕ ಸಿಎಂ, ಡಿಸಿಎಂ ಹಾಗೂ ಸಂಬಂಧಿಸಿದ ಸಚಿವರ ಗಮನ ಸೆಳೆದಿದ್ದೇನೆ. ಅದರ ಪರಿಣಾಮ ಡಿ.15ರಂದು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಸಿಂಧನೂರು ಜಿಲ್ಲೆಯನ್ನಾಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ಸಮಗ್ರ ವರದಿ ನೀಡುವಂತೆ ಸರ್ಕಾರವು ಸೂಚಿಸಿದೆ. ತಾವು ಪ್ರಾದೇಶಿಕ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕ ಪತ್ರ ರವಾನಿಸಿದ್ದೇನೆ. ಆದ್ದರಿಂದ ರಾಜಕೀಯ ಬದಿಗಿಟ್ಟು ಎಲ್ಲರೂ ಒಗ್ಗೂಡಿ ಸಿಂಧನೂರು ಜಿಲ್ಲಾ ಕೇಂದ್ರಕ್ಕಾಗಿ ಪ್ರಯತ್ನಶೀಲರಾಗಿ ಹೋರಾಡೋಣ’ ಎಂದು ಹೇಳಿದರು.

ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ, ತುರ್ವಿಹಾಳ ಅಮೋಘ ಸಿದ್ದೇಶ್ವರ ಮಠದ ಮಾದಯ್ಯ ಗುರುವಿನ್, ಮೌಲಾನ ಮಹ್ಮದ್ ಖಾಸೀಂ, ಜವಳಗೇರಾ ಚರ್ಚ್ ಫಾದರ್ ರಾಯಪ್ಪ ಕಂದಳ್ಳಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಮಕ್ಕಳ ತಜ್ಞ ಡಾ.ಕೆ.ಶಿವರಾಜ, ಎಪಿಎಂಸಿ ಮಾಜಿ ಅಧ್ಯಕ್ಷರಾದ ರಾಜಶೇಖರ ಪಾಟೀಲ, ಕೆ.ಭೀಮಣ್ಣ ವಕೀಲ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಕಮ್ಮವಾರಿ ಸಂಘದ ಮುಖಂಡ ಬಿ. ಶ್ರೀಹರ್ಷ, ದಲಿತ ಮುಖಂಡ ಎಚ್.ಎನ್.ಬಡಿಗೇರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಚಿಂತಕ ನಿರುಪಾದೆಪ್ಪ ಗುಡಿಹಾಳ, ಕಾಂಗ್ರೆಸ್ ಮುಖಂಡ ವೆಂಕಟೇಶ ರಾಗಲಪರ್ವಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಿಂಧನೂರು ಜಿಲ್ಲಾ ಕೇಂದ್ರ ರಚಿಸುವ ನಿಟ್ಟಿನಲ್ಲಿ ವಿಡಿಯೋ ಚಿತ್ರೀಕರಣವನ್ನು ಪ್ರದರ್ಶಿಸಲಾಯಿತು.

ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿ, ಮೂರುಮೈಲ್ ಕ್ಯಾಂಪ್‌ನ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ, ರೌಡಕುಂದ ಹಿರೇಮಠ ಸಂಸ್ಥಾನದ ಶಿವಯೋಗಿ ಶಿವಾಚಾರ್ಯ, ತುರ್ವಿಹಾಳ ಪುರವರ ಮಠದ ಅಮರಗುಂಡಯ್ಯ ಶಿವಾಚಾರ್ಯ, ಮಲ್ಲಯ್ಯ ತಾತ ಗೋನವಾರ, ಮಸ್ಕಿಯ ರುದ್ರಮುನಿ ಮಹಾಸ್ವಾಮಿ, ಸಿರಗುಪ್ಪದ ಬಸವಪ್ರಸಾದ ಶರಣರು, ಬಳಗಾನೂರು ಸಿದ್ದಬಸವ ಮಹಾಸ್ವಾಮಿ, ಮೌಲಾನ ಜಾಫರ್‌ಸಾಬ್, ಮೌಲಾನ ಮೀರಜ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಉಪಸ್ಥಿತರಿದ್ದರು. ಬಾಷಾ ಬಳಗಾನೂರು ನಿರೂಪಿಸಿದರು.

ಹಂಪನಗೌಡ ಬಾದರ್ಲಿ ಕೆ.ವಿರೂಪಾಕ್ಷಪ್ಪ ವೆಂಕಟರಾವ ನಾಡಗೌಡ ಬಸನಗೌಡ ಬಾದರ್ಲಿ ಮತ್ತು ಕೆ.ಕರಿಯಪ್ಪ ಅವರು ರಾಜಕೀಯ ಬದಿಗಿಟ್ಟು ಒಗ್ಗೂಡಿ ಯತ್ನಿಸಿದರೆ ಸಿಂಧನೂರು ಜಿಲ್ಲೆ ಕೇಂದ್ರವಾಗಿ ಘೋಷಣೆ ಆಗುವುದರಲ್ಲಿ ಸಂದೇಹವಿಲ್ಲ
ಕೆ.ಭೀಮಣ್ಣ ಮಾಜಿ ಅಧ್ಯಕ್ಷ ಎಪಿಎಂಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.