ಸಿಂಧನೂರು: ನಗರದ ಸರ್ಕಾರಿ ಮಹಾವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿನಿ ಶಿಫಾ ಕೊಲೆ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು ಶುಕ್ರವಾರ ಕಾಲೇಜಿಗೆ ಭೇಟಿ ನೀಡಿ ಪ್ರಾಚಾರ್ಯರು ಹಾಗೂ ಉಪನ್ಯಾಸಕರೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ಈ ವೇಳೆ ಮಾತನಾಡಿದ ಅವರು, ‘ಕೊಲೆ ಮಾಡಿರುವ ಪೈಶಾಚಿಕ ಕೃತ್ಯ ಖಂಡನೀಯ. ಆರೋಪಿಗೆ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
‘ಸರ್ಕಾರಿ ಮಹಾವಿದ್ಯಾಲಯದಲ್ಲಿ ಕಾರ್ಯನಿರ್ವಹಿಸದ ಸಿಸಿಟಿವಿ ಕ್ಯಾಮೆರಾಗಳನ್ನು ರಿಪೇರಿ ಮಾಡಿಸಬೇಕು. ಹೊಸ ಕ್ಯಾಮೆರಾಗಳನ್ನು ಅಳವಡಿಸಬೇಕು. ಪ್ರತಿ ತಿಂಗಳು ವಿದ್ಯಾರ್ಥಿಗಳ ಹಾಜರಾತಿಯನ್ನು ಅವರ ಸಹಿಯೊಂದಿಗೆ ಪಡೆಯಬೇಕು. ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆ ನಿಗಾವಹಿಸಬೇಕು. ಅನುಮಾನಾಸ್ಪದವಾಗಿ ಏನಾದರೂ ಕಂಡು ಬಂದಲ್ಲಿ ಅವರ ಪಾಲಕರ ಗಮನಕ್ಕೆ ತರಬೇಕು’ ಎಂದರು.
ಪ್ರಾಂಶುಪಾಲ ಶಿವಯ್ಯ ಎಂ, ಗ್ರಂಥಪಾಲಕ ಯಲ್ಲಪ್ಪ ಗೋನವಾರ, ಪ್ರಾಧ್ಯಾಪಕರಾದ ಹನುಮನಗೌಡ, ಸಿದ್ದರಾಮೇಶ, ಬಿಸಲ್, ವಿಶ್ವನಾಥ ಪಾಟೀಲ್, ಡಾ.ಹುಸೇನಬಾಷಾ, ಶ್ರೀನಿವಾಸ, ಬಸವರಾಜ, ವೆಂಕಟೇಶ ರೆಡ್ಡಿ, ವಿಜಯಲಕ್ಷ್ಮಿ, ಕಾಂಗ್ರೆಸ್ ಮುಖಂಡ ವೀರೇಶ ರಾರಾವಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.