ADVERTISEMENT

ಸಿಂಧನೂರು | ಐವರ ಕೊಲೆ: ಮೂವರಿಗೆ ಮರಣ ದಂಡನೆ, 9 ಜನರಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 13:22 IST
Last Updated 8 ಏಪ್ರಿಲ್ 2025, 13:22 IST
<div class="paragraphs"><p>ಮರಣದಂಡನೆ</p></div>

ಮರಣದಂಡನೆ

   

(ಐಸ್ಟೋಕ್ ಚಿತ್ರ)

ಸಿಂಧನೂರು: ನಗರದ ಸುಕಾಲಪೇಟೆಯಲ್ಲಿ ಜುಲೈ 11, 2020ರಂದು ಐದು ಜನರನ್ನು ಬರ್ಬರವಾಗಿ ಕೊಲೆ ಮಾಡಿದ ಹಾಗೂ ಇಬ್ಬರ ಕೊಲೆ ಅಪರಾಧಿಗಳಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಿ.ಬಿ.ಜಕಾತಿ ಮಂಗಳವಾರ ಶಿಕ್ಷೆ ಪ್ರಕಟ ಮಾಡಿದ್ದಾರೆ.

ADVERTISEMENT

1 ರಿಂದ 3ನೇ ಆಪರಾಧಿಗಳಿಗೆ ಮರಣ ದಂಡನೆ ಹಾಗೂ ತಲಾ ₹47,000 ದಂಡ, 4 ರಿಂದ 12ನೇ ಅಪರಾಧಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ತಲಾ ₹97,500 ದಂಡ ವಿಧಿಸಿ ಆದೇಶ ನೀಡಿದ್ದಾರೆ.

ಸಣ್ಣ ಫಕೀರಪ್ಪ ಸೋಮಪ್ಪ ಕೋಣದ, ಅಮ್ಮಣ್ಣ @ ಅಂಬಣ್ಣ ಸೋಮಪ್ಪ ಕೋಣದ, ಸೋಮಶೇಖರ್ ಹಿರೇಫಕೀರಪ್ಪ @ ದೊಡ್ಡ ಫಕೀರಪ್ಪ ಕೋಣದ, ರೇಖಾ @ ಸಿದ್ದಮ್ಮ ಸಣ್ಣ ಫಕೀರಪ್ಪ ಕೋಣದ, ಗಂಗಮ್ಮ ಅಂಬಣ್ಣ ಹೆಬ್ಬಾಳ, ದೊಡ್ಡ ಫಕೀರಪ್ಪ ಸೋಮಪ್ಪ ಕೋಣದ, ಹನುಮಂತ ಸೋಮಪ್ಪ ಕೋಣದ, ಹೊನ್ನೂರಪ್ಪ ಸೋಮಪ್ಪ ಕೋಣದ, ಬಸಲಿಂಗಪ್ಪ ದೊಡ್ಡ ಫಕೀರಪ್ಪ ಕೋಣದ, ಅಮರೇಶ್ ಮಲ್ಲಪ್ಪ, ಶಿವರಾಜ ಅಂಬಣ್ಣ ಹೆಬ್ಬಾಳ, ಪರಸಪ್ಪ ಜಂಬುಲಿಂಗಪ್ಪ ಸಿದ್ದಾಪುರ  ಶಿಕ್ಷೆಗೊಳಗಾದವರು.

ಏನಿದು ಪ್ರಕರಣ?:

ನಗರದ ಸುಕಾಲಪೇಟೆಯ ಈರಪ್ಪ ಕೋಣದ್ ಅವರ ಪುತ್ರ ಮೌನೇಶ, ಅದೇ ಓಣಿಯ ಸಣ್ಣ ಫಕೀರಪ್ಪನ ಪುತ್ರಿ ಮಂಜುಳಾ ಎರಡು ಮನೆಗಳವರ ತೀವ್ರ ವಿರೋಧದ ಮಧ್ಯೆ ವಿವಾಹವಾಗಿದ್ದರು. ವಿವಾಹದ ನಂತರ ಎರಡು ಕುಟುಂಬಗಳ ಮಧ್ಯೆ ಪ್ರತಿನಿತ್ಯ ವಾಗ್ವಾದ, ಜಗಳ ಸಾಮಾನ್ಯವಾಗಿತ್ತು. ಜುಲೈ 11, 2020 ರಂದು ಸಂಜೆ ದೊಡ್ಡ ಫಕೀರಪ್ಪ ಕೋಣದ್ ಸೇರಿದಂತೆ ಅವರ ಸಹೋದರರಾದ ಸಣ್ಣ ಫಕೀರಪ್ಪ, ಅಂಬಣ್ಣ, ಸೋಮಶೇಖರ ಮತ್ತಿತರರು ಕೊಡಲಿ, ಮಚ್ಚು, ಬಡಿಗೆ ಸೇರಿದಂತೆ ಮಾರಕಾಸ್ತ್ರಗಳಿಂದ ಈರಪ್ಪ ಕೋಣದ್ ಮನೆಗೆ ನುಗ್ಗಿ ಎಲ್ಲರನ್ನೂ ಅಟ್ಟಾಡಿಸಿ ದಾಳಿ ಮಾಡಿದ್ದರು. ಈ ಘಟನೆಯಲ್ಲಿ ಐವರು ಕೊಲೆಗೀಡಾಗಿ, ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು. ದಾಳಿಯ ಮುನ್ಸೂಚನೆ ಅರಿತಿದ್ದ, ಪ್ರೇಮಿಸಿ ವಿವಾಹವಾಗಿದ್ದ ಮೌನೇಶ ಮತ್ತು ಮಂಜುಳಾ ಶಹರ ಪೊಲೀಸ್ ಠಾಣೆಗೆ ತೆರಳಿ ಆಶ್ರಯ ಪಡೆದಿದ್ದರು.

ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿತರ ವಿರುದ್ಧ ಅಂದಿನ ತನಿಖಾಧಿಕಾರಿ ಸರ್ಕಲ್ ಇನ್ಸ್‍ಪೆಕ್ಟರ್ ಬಾಲಚಂದ್ರ ಲಕ್ಕಂ ತನಿಖೆ ಕೈಗೊಂಡು ದೋಷಾರೋಪಣ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಆರ್.ಎ.ಗಡಕರಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.