
ಸಿಂಧನೂರು: ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕಲ್ಯಾಣ ಕರ್ನಾಟಕದ ಮಹತ್ವಾಕಾಂಕ್ಷಿಯ ಮುನಿರಾಬಾದ್-ಮೆಹಬೂಬನಗರ ರೈಲ್ವೆ ಯೋಜನೆ ಕಾಮಗಾರಿ ಆರಂಭವಾಗಿ 30 ವರ್ಷಗಳು ಕಳೆದಿವೆ. ಆದರೆ ಈವರೆಗೂ ಈ ಭಾಗದ ಜನರಿಗೆ ರೈಲಿನಲ್ಲಿ ಸಂಚರಿಸುವ ಭಾಗ್ಯ ಸಿಕ್ಕಿಲ್ಲ.
1996ರಲ್ಲಿ ಅಂದಿನ ಸಂಸದ ಬಸವರಾಜ ರಾಯರೆಡ್ಡಿ ರೈಲ್ವೆ ಯೋಜನೆಯ ಕನಸು ಬಿತ್ತಿದರು. ಅಂದಿನ ಪ್ರಧಾನಿ ಎಚ್.ಡಿ. ದೇವೇಗೌಡರು ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ ಸಂಸದರಾದ ಎಚ್.ಜಿ. ರಾಮುಲು, ಕೆ.ವಿರೂಪಾಕ್ಷಪ್ಪ ಮತ್ತು ಶಿವರಾಮಗೌಡರ ಅವಧಿಯಲ್ಲಿ ತೆವಳುತ್ತ ಸಾಗಿದ್ದ ಕಾಮಗಾರಿಗೆ ಕರಡಿ ಸಂಗಣ್ಣ ಸಂಸದರಾದ ಬಳಿಕ ವೇಗ ನೀಡಿದ್ದರು. ಇದರಿಂದಾಗಿ ಗಂಗಾವತಿ–ಸಿಂಧನೂರಿನವರೆಗೆ ರೈಲ್ವೆ ಸಂಚಾರ ಆರಂಭವಾಗಿದೆ. ಆದರೆ ಸಿಂಧನೂರು ರೈಲ್ವೆ ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆಯಿದೆ.
‘ಸಿಂಧನೂರಿ–ರಾಯಚೂರು ರೈಲ್ವೆ ಮಾರ್ಗಕ್ಕೆ ಭೂಸ್ವಾಧೀನವಾಗಿದೆ. ಭೂ ಮಾಲೀಕರಿಗೆ ಒಟ್ಟು ₹ 204 ಕೋಟಿ ಪರಿಹಾರ ನೀಡಬೇಕಿತ್ತು. ಅದರಲ್ಲಿ ₹ 189 ಕೋಟಿ ವಿತರಿಸಲಾಗಿದೆ. ಕೆಲವು ಭೂಮಿಗಳ ವಿವಾದ ನ್ಯಾಯಾಲಯದಲ್ಲಿದ್ದು, ಆದೇಶಕ್ಕಾಗಿ ಕಾಯುತ್ತಿದ್ದೇವೆ’ ಎಂದು ಭೂಸ್ವಾಧೀನ ಇಲಾಖೆ ವಿಶೇಷ ಅಧಿಕಾರಿ ಕೆ.ಶ್ರುತಿ ಹೇಳಿದರು.
ಮೂಲಸೌಲಭ್ಯಗಳ ಕೊರತೆ: ಒಂದೂವರೆ ವರ್ಷದ ಹಿಂದೆ ರೈಲ್ವೆ ನಿಲ್ದಾಣ ಉದ್ಘಾಟನೆಯಾಗಿದ್ದು, ಈವರೆಗೂ ಮೂಲಸೌಕರ್ಯ ಅಭಿವೃದ್ಧಿಯಾಗಿಲ್ಲ. ಸಾರ್ವಜನಿಕ ಶೌಚಾಲಯ, ಕುಡಿಯುವ ನೀರಿನ ಸೌಕರ್ಯವಿಲ್ಲ. ರೈಲ್ವೆ ನಿಲ್ದಾಣಕ್ಕೆ ರಸ್ತೆ ನಿರ್ಮಾಣ ಕಾಮಗಾರಿ ಮುಗಿದಿಲ್ಲ. ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ಮಣ್ಣು ಮಿಶ್ರಿತ ಮರಂ ಹಾಕಿರುವುದರಿಂದ ರಸ್ತೆ ಧೂಳುಮಯವಾಗಿದೆ. ಸಿಸಿ ಕ್ಯಾಮೆರಾ ಇಲ್ಲ, ಪೈಲೆಟ್ ಸಿಬ್ಬಂದಿಯ ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ಕಾಮಗಾರಿ ನಡೆದಿದೆ. ಮುಂಗಡ ಸೀಟು ಕಾಯ್ದಿರಿಸುವಿಕೆಯ ಕೌಂಟರ್ ಇಲ್ಲ. ನಿಲ್ದಾಣವು ಸಮಸ್ಯೆಗಳ ತಾಣವಾಗಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ದೊಡ್ಡನಗೌಡ ಕಲ್ಲೂರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2015 ರೈಲ್ವೆ ಸಚಿವ ವಿ.ಸೋಮಣ್ಣ ಅವರು ಗಿಣಿಗೇರಾ-ರಾಯಚೂರು ರೈಲ್ವೆ ಮಾರ್ಗದ ಪೈಕಿ ಸಿಂಧನೂರಿ–ರಾಯಚೂರಿನವರೆಗೆ 81 ಕಿ.ಮೀ ಮಾರ್ಗದ ಕಾಮಗಾರಿಗೆ ಶಂಕುಸ್ಥಾಪನೆಗೆ ಸಿಂಧನೂರಿಗೆ ಬಂದಿದ್ದರು. ಈ ವೇಳೆ ಶಾಸಕ ಹಂಪನಗೌಡ ಬಾದರ್ಲಿ ಸೇರಿದಂತೆ ವಿವಿಧ ವ್ಯಾಪಾರಿ ಸಂಘಟನೆಗಳ ಮುಖಂಡರು, ಗೂಡ್ಸ್ ರೈಲು ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸೋಮಣ್ಣಗೆ ಮನವಿ ಸಲ್ಲಿಸಿದ್ದರು. ಅದಕ್ಕೆ ಸಚಿವರು 6 ತಿಂಗಳಲ್ಲಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಈ ಕುರಿತು ಶಾಸಕ ಹಂಪನಗೌಡ ಬಾದರ್ಲಿ ಅವರನ್ನು ಸಂಪರ್ಕಿಸಿದಾಗ ಸಚಿವ ಸೋಮಣ್ಣ ಅವರನ್ನು ಭೇಟಿಯಾಗಿ ಗೂಡ್ಸ್ ರೈಲು ಅಗತ್ಯ ಕುರಿತು ಚರ್ಚಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇನ್ನೊಮ್ಮೆ ಭೇಟಿಯಾಗಿ ಗಮನ ಸೆಳೆಯುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಸಿಂಧನೂರಿನಿಂದ ಬೆಳಿಗ್ಗೆ 5.15ಕ್ಕೆ ಹುಬ್ಬಳ್ಳಿಗೆ ಹೊರಡುವ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಡೆಮೊ ರೈಲಿನಲ್ಲಿ ಶೌಚಾಲಯ ವಾಶ್‌ರೂಮ್ ಇಲ್ಲ. ಹೀಗಾಗಿ ಪ್ರಯಾಣಿಕರು ಮೂತ್ರ ಮಲ ವಿಸರ್ಜನೆಗೆ ಪರದಾಡುವಂತಾಗಿದೆಸೈಯ್ಯದ್ ಆಸೀಫ್ ಮಹಿಬೂಬಿಯಾ ಕಾಲೊನಿ
ಯುಪಿಎ ಸರ್ಕಾರದಲ್ಲಿ ಮುನಿರಾಬಾದ್-ಮಹಿಬೂಬ್‍ನಗರ ರೈಲ್ವೆ ಮಾರ್ಗ ಪ್ರಗತಿ ಕಂಡಿರಲಿಲ್ಲ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಭಾಗದ ಜನರ ರೈಲ್ವೆ ಸಂಚಾರದ ಕನಸು ನನಸಾಗಿದೆಅಮರೇಗೌಡ ವಿರೂಪಾಪುರ ಬಿಜೆಪಿ ಮುಖಂಡ
ರೈತರ ಬೆಳೆಗಳಿದ್ದು ಖಾಲಿ ಜಮೀನುಗಳಲ್ಲಿ ಕಾಮಗಾರಿ ನಡೆದಿದೆ. ಕೊಟ್ನೇಕಲ್‍ವರೆಗೆ ಪೂರ್ಣ ಕಾಮಗಾರಿ ಮುಗಿದು ರೈಲ್ವೆ ಸಂಚರಿಸಬೇಕಾದರೆ 2 ವರ್ಷ ಬೇಕಾಗಬಹುದುಉಮಾಮಹೇಶ್ವರ ಎಇ ರೈಲ್ವೆ ಇಲಾಖೆ ಹುಬ್ಬಳ್ಳಿ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.