ADVERTISEMENT

ಸಿಂಧನೂರು | ‘ವಿದ್ಯಾರ್ಥಿ ರಥ’ ಬಸ್‍ಗಳ ಸಂಚಾರ ಶುರು

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 4:40 IST
Last Updated 6 ಜನವರಿ 2026, 4:40 IST
<div class="paragraphs"><p>ಸಿಂಧನೂರಿನ ಬಸ್ ನಿಲ್ದಾಣದಲ್ಲಿ ‘ವಿದ್ಯಾರ್ಥಿ ರಥ’ ವಿಶೇಷ ಬಸ್‌ಗಳಿಗೆ ಶಾಸಕ ಹಂಪನಗೌಡ ಬಾದರ್ಲಿ ಚಾಲನೆ ನೀಡಿದರು</p></div>

ಸಿಂಧನೂರಿನ ಬಸ್ ನಿಲ್ದಾಣದಲ್ಲಿ ‘ವಿದ್ಯಾರ್ಥಿ ರಥ’ ವಿಶೇಷ ಬಸ್‌ಗಳಿಗೆ ಶಾಸಕ ಹಂಪನಗೌಡ ಬಾದರ್ಲಿ ಚಾಲನೆ ನೀಡಿದರು

   

ಸಿಂಧನೂರು: ‘ಗ್ರಾಮೀಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕಾಗಿ ಪ್ರತ್ಯೇಕವಾಗಿ 14 ಬಸ್‍ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿರುವುದು ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಹೆಜ್ಜೆಯಾಗಿದೆ’ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ಸ್ಥಳೀಯ ಬಸ್ ನಿಲ್ದಾಣದ ಆವರಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಶಾಸಕರ ಅನುದಾನದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ‘ವಿದ್ಯಾರ್ಥಿ ರಥ’ ವಿಶೇಷ ಬಸ್ ಸೌಕರ್ಯ ಒದಗಿಸಿದ್ದಕ್ಕಾಗಿ ಸೋಮವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಶಾಸಕರ ಸಂವಾದ ಮತ್ತು ನೂತನ ಬಸ್‍ಗಳಿಗೆ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‌‘ಈ 14 ಬಸ್‍ಗಳು ಶಾಲಾ-ಕಾಲೇಜುಗಳ ಅವಧಿಗೆ ಅನುಗುಣವಾಗಿ ಸಂಚರಿಸಲಿದ್ದು, ಇದರ ಸದುಪಯೋಗ ಮತ್ತು ರಕ್ಷಣೆ ವಿದ್ಯಾರ್ಥಿಗಳ ಜವಾಬ್ದಾರಿ. ನಿತ್ಯ ಶಾಲಾ-ಕಾಲೇಜಿಗೆ ಬರುವ ಮೂಲಕ ಶೇ.75 ರಷ್ಟು ಹಾಜರಾತಿಯನ್ನು ವಿದ್ಯಾರ್ಥಿಗಳು ಹೊಂದಿರಬೇಕು. ವಿದ್ಯಾರ್ಥಿಗಳ ಹಾಜರಾತಿ, ಶಿಕ್ಷಣದ ಗುಣಮಟ್ಟ ಮತ್ತು ಮೂಲಸೌಕರ್ಯಗಳ ಕುರಿತು ತಾವು ಸಹ ಮೇಲ್ವಿಚಾರಣೆ ನಡೆಸುತ್ತೇನೆ. ಅಕ್ಷರವಂತರು ಮತ್ತು ಗುಣವಂತರಾದರೆ ಸಮಾಜವೂ ಪರಿವರ್ತನೆ ಆಗುವುದರಲ್ಲಿ ಸಂದೇಹವಿಲ್ಲ’ ಎಂದರು.

‘ಈಗಾಗಲೇ ಕೌಶಲ ತರಬೇತಿ ಕೇಂದ್ರ ಮಂಜೂರಾಗಿದೆ. ₹5 ಕೋಟಿ ವೆಚ್ಚದಲ್ಲಿ ಐಎಎಸ್, ಐಪಿಎಸ್, ಕೆಎಎಸ್, ಐಆರ್‌ಎಸ್ ತರಬೇತಿ ಕೇಂದ್ರ ಆರಂಭಿಸಲಾಗುವುದು’ ಎಂದು ಭರವಸೆ ನೀಡಿದರು.

ಆಕ್ಸ್‌ಫರ್ಡ್ ಕಾಲೇಜಿನ ವಿದ್ಯಾರ್ಥಿನಿ ಕೀರ್ತನಾ ‘ಶಿವಜ್ಯೋತಿ ನಗರದಲ್ಲಿರುವ ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‍ಗಳ ವಿದ್ಯಾರ್ಥಿನಿಯರು 3 ಕಿ.ಮೀ ನಡೆದುಕೊಂಡೇ ಕಾಲೇಜಿಗೆ ಬರುವಂತಾಗಿದೆ. ಹೀಗಾಗಿ ಬಸ್ ಸಂಚಾರ ಕಲ್ಪಿಸಿ ಅನುಕೂಲ ಮಾಡಬೇಕು’ ಎಂದು ಮನವಿ ಮಾಡಿದರು.

ವಿಸ್ಡಮ್ ಕಾಲೇಜಿನ ವಿದ್ಯಾರ್ಥಿನಿ ಅಲ್ಪಿಯಾ ರೌಡಕುಂದಾ, ಎಲ್‍ಬಿಕೆ ಕಾಲೇಜಿನ ವಿದ್ಯಾರ್ಥಿನಿ ಹನುಮಂತಿ ಗಾಂಧಿನಗರ, ಎಕ್ಸ್‍ಲೆಂಟ್ ಕಾಲೇಜಿನ ವಿದ್ಯಾರ್ಥಿನಿ ಮೌನಿಕಾ ಬಪ್ಪೂರು, ಆದಿತ್ಯ ಕಾಲೇಜು ವಿದ್ಯಾರ್ಥಿ ಪ್ರಕಾಶ, ವಿಸ್ಡಮ್ಕಾಲೇಜಿ ವಿದ್ಯಾರ್ಥಿ ಬಸವರಾಜ ಮಾಡಶಿರವಾರ ಅನಿಸಿಕೆ ವ್ಯಕ್ತಪಡಿಸಿ ಶಾಸಕ ಹಂಪನಗೌಡ ಬಾದರ್ಲಿ ಅವರೊಂದಿಗೆ ಸಂವಾದ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ತಾ.ಪಂ. ಇಒ ಚಂದ್ರಶೇಖರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಡಿಪೊ ವ್ಯವಸ್ಥಾಪಕ ಹೊನ್ನಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರಡ್ಡೇರ್, ರಾಯಚೂರು ವಾಲ್ಮೀಕಿ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್‍ ಸದಸ್ಯರಾದ ಸತ್ಯನಾರಾಯಣ ಶ್ರೇಷ್ಠಿ, ಆರ್.ಅನಿಲಕುಮಾರ, ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಎನ್.ಸತೀಶ್, ಸಿಪಿಐ ವೀರಾರೆಡ್ಡಿ ಎಚ್ ಉಪಸ್ಥಿತರಿದ್ದರು. ಪರಶುರಾಮ ಮಲ್ಲಾಪುರ ನಿರೂಪಿಸಿದರು. 

ರೈತನ ಮಗನ ಧ್ವನಿ ಅಡಗಿಸುವ ಪ್ರಯತ್ನ: ಬಸನಗೌಡ ಬಾದರ್ಲಿ

ಸಿಂಧನೂರು: ‘ಶಾಸಕ ಹಂಪನಗೌಡ ಬಾದರ್ಲಿ. ಸಾಮಾನ್ಯ ರೈತನ ಮಗ ರಾಜಕಾರಣದಲ್ಲಿ ಬೆಳೆಯಬಾರದೆಂಬ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ತೀವ್ರ ವಾಗ್ದಾಳಿ ನಡೆಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಗ್ರಾಮೀಣ ಭಾಗದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್‍ಸಿಂಗ್ ಅವರು 14 ವಿಶೇಷ ಬಸ್‍ಗಳನ್ನು ಒದಗಿಸಿದ್ದಾರೆ. ನಾನು ಅಧಿವೇಶನದಲ್ಲಿ ವಿದ್ಯಾರ್ಥಿಗಳ ಸಮಸ್ಯೆ, ಬಸ್‍ಗಳ ಕೊರತೆ, ಹಾಸ್ಟೆಲ್ ಸಮಸ್ಯೆಗಳು ಕುರಿತು ಧ್ವನಿಯೆತ್ತಿ ವಿದ್ಯಾರ್ಥಿಗಳ ಪರ ಕಾಳಜಿ ವಹಿಸಿದ್ದೇನೆ’ ಎಂದು ಹೇಳಿದರು.

‘ಶಾಸಕರು ತಮ್ಮ ಮನೆಯ ಹಣದಿಂದ 14 ಬಸ್‍ಗಳನ್ನು ಖರೀದಿಸಿ ವಿದ್ಯಾರ್ಥಿಗಳ ಸಂಚಾರಕ್ಕೆ ಬಿಟ್ಟಂತೆ ವರ್ತಿಸಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ’ ಎಂದು ದೂರಿದರು.

‘ಕಾಂಗ್ರೆಸ್ ಪಕ್ಷದ ಚಿಹ್ನೆಯಿಂದ ಹಂಪನಗೌಡರು ಗೆದ್ದಿದ್ದಾರೆಯೇ ಹೊರತು, ಅವರ ವೈಯಕ್ತಿಕ ಸಾಧನೆ ಮತ್ತು ಅಭಿವೃದ್ಧಿ ಕೆಲಸಗಳಿಂದ ಅಲ್ಲ. ಅವರು ಕಾಂಗ್ರೆಸ್ ಪಕ್ಷದ ಚಿಹ್ನೆ ಬಿಟ್ಟು ಹೊರಗೆ ಹೋಗಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಠೇವಣಿ ಕಳೆದುಕೊಳ್ಳುತ್ತಾರೆ. ನನ್ನ ಮೇಲೆ ಆರೋಪ ಇದ್ದರೆ ನೇರವಾಗಿ ಮಾಡನಾಡಲಿ. ಆದರೆ ಅಧಿಕಾರಿಗಳನ್ನು ನಿಯಂತ್ರಿಸಿ, ಬೆದರಿಸುವ ಕೆಲಸವನ್ನು ಮಾಡಬಾರದು’ ಎಂದು
ಟೀಕಿಸಿದರು.

‘ವಿರೋಧ ಪಕ್ಷದ ನಾಯಕರೊಂದಿಗೆ ಸೇರಿಕೊಂಡು ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ಅವರ ಮೇಲೆ ಇನ್ನೂ ಬಹಳಷ್ಟು ಆರೋಪಗಳಿದ್ದು, ಈ ಬಗ್ಗೆ ಸಿಎಂ, ಡಿಸಿಎಂ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಗಮನಕ್ಕೆ ತಂದಿದ್ದೇನೆ’ ಎಂದು ತಿಳಿಸಿದರು.

ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಶಿವುಕುಮಾರ ಜವಳಿ, ವೀರರಾಜು ಬೂದಿಹಾಳ ಕ್ಯಾಂಪ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.