ADVERTISEMENT

ಸಿರವಾರ: ಶಿಕ್ಷಕರ ಕೊರತೆಯ ನಡುವೆ ಶೇ 96.9ರಷ್ಟು ಅಂಕ ಪಡೆದ ವಿದ್ಯಾರ್ಥಿನಿ

ಪಿ.ಕೃಷ್ಣ
Published 5 ಮೇ 2025, 5:03 IST
Last Updated 5 ಮೇ 2025, 5:03 IST
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 96.9ರಷ್ಟು ಅಂಕ ಪಡೆದ ಸಿರವಾರ ಸರ್ಕಾರಿ ಪ್ರೌಢಶಾಲೆಯ ಪ್ರತೀಕಾ ಅವರ ಮನೆಗೆ ದೈಹಿಕ ಶಿಕ್ಷಣ ಶಿಕ್ಷಕ ಮಹಿಬೂಬು ಪಾಷ, ಕನ್ನಡ ಶಿಕ್ಷಕಿ ಮಂಜುಳಾ ಸಗರದ ತೆರಳಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿದರು
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 96.9ರಷ್ಟು ಅಂಕ ಪಡೆದ ಸಿರವಾರ ಸರ್ಕಾರಿ ಪ್ರೌಢಶಾಲೆಯ ಪ್ರತೀಕಾ ಅವರ ಮನೆಗೆ ದೈಹಿಕ ಶಿಕ್ಷಣ ಶಿಕ್ಷಕ ಮಹಿಬೂಬು ಪಾಷ, ಕನ್ನಡ ಶಿಕ್ಷಕಿ ಮಂಜುಳಾ ಸಗರದ ತೆರಳಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿದರು   

ಸಿರವಾರ: ಸರ್ಕಾರಿ ಶಾಲೆಗಳು ಎಂದರೆ ಅಲ್ಲಿ ಕಾಣುವ ಶಿಕ್ಷಕರ ಕೊರತೆ, ಸೌಲಭ್ಯಗಳ ಮರೀಚಿಕೆ, ಇಂತಹ ಸಾಕಷ್ಟು ಸಮಸ್ಯೆಗಳಿದ್ದರೂ ಉತ್ತಮ ಅಂಕ ಪಡೆದು ವೈಯಕ್ತಿಕ ಉತ್ತಮ ಅಭ್ಯಾಸದೊಂದಿಗೆ ಶೇ 96.9ರಷ್ಟು ಅಂಕ ಪಡೆದು ಶಾಲೆಗೆ ಮತ್ತು ಪಟ್ಟಣಕ್ಕೆ ಕೀರ್ತಿ ತಂದಿದ್ದಾರೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರತೀಕಾ.

ಈ ಬಾರಿಯ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆ ಫಲಿತಾಂಶದಲ್ಲಿ ಶಿಕ್ಷಕರ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳ ಫಲಿತಾಂಶಗಳು ಕಡಿಮೆಯಾಗಿದ್ದರೂ, ಸೌಲಭ್ಯಗಳಿದ್ದರೂ ಖಾಸಗಿ ಪ್ರೌಢಶಾಲೆಗಳ ಫಲಿತಾಂಶದಲ್ಲಿ ಯಾವುದೇ ಏರಿಕೆ ಇಲ್ಲದಿರುವುದು ಶೋಚನೀಯ ಸಂಗತಿಯಾಗಿದೆ.

ಇಂತಹ ದಯನೀಯ ಶಿಕ್ಷಣ ವ್ಯವಸ್ಥೆಯ ಪರಿಸ್ಥಿತಿಯಲ್ಲಿ ಕೂಲಿ ಕೆಲಸ ಮಾಡುವ ಬಡ ಕುಟುಂಬದ ವಿದ್ಯಾರ್ಥಿನಿ ಪ್ರತೀಕಾ ತಂದೆ ಶಿವಕುಮಾರ ಮನೆಯ ಕೆಲಸಗಳ ಒತ್ತಡಗಳ ನಡುವೆ, ಶಿಕ್ಷಕರ ಕೊರತೆ ಇದ್ದರೂ ವೈಯಕ್ತಿಕ ಉತ್ತಮ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ADVERTISEMENT

ಪ್ರತೀಕಾ ಕನ್ನಡದಲ್ಲಿ 125ಕ್ಕೆ 125, ಗಣಿತದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. ಸಮಾಜ ವಿಜ್ಞಾನ 99, ವಿಜ್ಞಾನ 98, ಹಿಂದಿ 98, ಇಂಗ್ಲಿಷ್ ವಿಷಯದಲ್ಲಿ 86 ಸೇರಿ ಒಟ್ಟು 625ಕ್ಕೆ 606 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಅಂಜುಮ್ ನಬಿ ಸಾಬ್ ಶೇ 91.04 ರಷ್ಟು ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರತೀಕಾ ಸೇರಿದಂತೆ ಅಂಜುಮ್, ರಾಜೇಶ್ವರಿ, ಪ್ರಜ್ವಲಾ ನಾಲ್ಕು ವಿದ್ಯಾರ್ಥಿನಿಯರು ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

‘ಶಾಲೆಯಲ್ಲಿ ಇರುವ ಶಿಕ್ಷಕರು ಮತ್ತು ಅತಿಥಿ ಶಿಕ್ಷಕರ ಸಲಹೆ, ಸಹಕಾರದೊಂದಿಗೆ ಈ ಸಾಧನೆ ಮಾಡಲು ಅನುಕೂಲವಾಗಿದ್ದು, ಮನೆಯವರು ಪರೀಕ್ಷೆ ಸಮಯದಲ್ಲಿ ಯಾವುದೇ ಕೆಲಸ ನೀಡದೇ ಅಭ್ಯಾಸ ಮಾಡಲು ಸಹಕಾರ ನೀಡಿದ್ದಾರೆ’ ಎಂದು ಪ್ರತೀಕಾ ಶಿವಕುಮಾರ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.