ಸಿರವಾರ: ತಾಲ್ಲೂಕಿನ ನವಲಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಸಿಂಗ್ ನಾಯ್ಕ್ ತಾಂಡಾದಲ್ಲಿ ವಿದ್ಯುತ್ ಪರಿವರ್ತಕ ಕೆಟ್ಟು 15 ದಿನ ಕಳೆದಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಾಂಡಾದ ನಿವಾಸಿಗಳು ಕತ್ತಲಲ್ಲಿ ವಾಸಿಸುವಂತಾಗಿದೆ.
ವಿದ್ಯುತ್ ಪರಿವರ್ತಕ ಸುಟ್ಟ ತಕ್ಷಣ ನಿವಾಸಿಗಳು ಜೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಅಧಿಕಾರಿಗಳು ವಿದ್ಯುತ್ ಪರಿವರ್ತಕ ತೆಗೆದುಕೊಂಡು ಹೋಗಿದ್ದು ಬಿಟ್ಟರೆ ಇಲ್ಲಿಯರೆಗೂ ಯಾವುದೇ ಬದಲಿ ಪರಿವರ್ತಕ ತಂದು ಜೋಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಸಮಸ್ಯೆಯಿಂದ ತಾಂಡಾ ನಿವಾಸಿಗಳಿಗೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ರಾತ್ರಿ ವೇಳೆ ಸೊಳ್ಳೆಗಳ ಕಾಟಕ್ಕೆ ಮಕ್ಕಳು, ವಯೋವೃದ್ಧರು ನೆಮ್ಮದಿಯಾಗಿ ನಿದ್ದೆ ಮಾಡುತ್ತಿಲ್ಲ. ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ ಎಂದು ಜೆಸ್ಕಾಂ ಅಧಿಕಾರಿಗಳ ವಿರುದ್ಧ ದೂರಿದ್ದಾರೆ.
ನೂತನ ವಿದ್ಯುತ್ ಪರಿವರ್ತಕವನ್ನು ನೀಡುವಂತೆ ಜೆಸ್ಕಾಂ ಇಇ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದರೂ ಕೂಡ, ಅಧಿಕಾರಿಗಳು ವಿದ್ಯುತ್ ಪರಿವರ್ತಕವನ್ನು ನೀಡದೆ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಕೂಡಲೇ ತಾಂಡಾಕ್ಕೆ ನೂತನ ವಿದ್ಯುತ್ ಪರಿವರ್ತಕವನ್ನು ನೀಡಬೇಕು. ಒಂದು ವೇಳೆ ಮತ್ತಷ್ಟು ವಿಳಂಬ ಮಾಡಿದರೆ ತಾಂಡಾ ನಿವಾಸಿಗಳೆಲ್ಲರೂ ಸೇರಿಕೊಂಡು ರಾಯಚೂರು ಜೆಸ್ಕಾಂ ಕಚೇರಿಯ ಎದುರು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಸಕಾಲದಲ್ಲಿ ನೂತನ ವಿದ್ಯುತ್ ಪರಿವರ್ತಕವನ್ನು ನೀಡದೆ ಜೆಸ್ಕಾಂ ಇಇ ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರಿಂದ ಕುಡಿಯುವ ನೀರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವಂತಾಗಿದೆಅಮರೇಶ ಪವಾರ್ ರಾಮಸಿಂಗ್ ನಾಯ್ಕ್ ತಾಂಡಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.