
ಸಾವು
(ಪ್ರಾತಿನಿಧಿಕ ಚಿತ್ರ)
ಸಿರವಾರ: ತಾಲ್ಲೂಕಿನ ಮಲ್ಲಟ ಗ್ರಾಮದಲ್ಲಿ ಎದೆ ಮಟ್ಟದ ಹಳ್ಳದ ನೀರಿನಲ್ಲಿ ಶವವನ್ನು ಹೊತ್ತುಕೊಂಡು ಹೋಗಿ ಜೀವಭಯದಲ್ಲಿ ಶವಸಂಸ್ಕಾರ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶವ ಸಂಸ್ಕಾರಕ್ಕಾಗಿ ಗುರುತಿಸಿರುವ ಸ್ಥಳವು ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿದ್ದು, ಸ್ಮಶಾನಕ್ಕೆ ತೆರಳಲು ದಾರಿ ಇಲ್ಲದ ಕಾರಣ ಹಳ್ಳವನ್ನು ದಾಟಿಕೊಂಡು ಹೋಗುವ ಪರಿಸ್ಥಿತಿ ಇದೆ. ಅ.24ರಂದು ಮೃತ ವ್ಯಕ್ತಿಯ ಶವವನ್ನು ಹಳ್ಳದಲ್ಲಿಯೇ ನಡೆದುಕೊಂಡು ಹೋಗಿ ಶವಸಂಸ್ಕಾರ ಮಾಡಲಾಗಿದೆ.
ಮಳೆಗಾಲ ಹೊರತು ಪಡಿಸಿದ ದಿನಗಳಲ್ಲಿ ಹಳ್ಳದಲ್ಲಿ ಸಾಕಷ್ಟು ನೀರು ಇರದ ಕಾರಣ ಹಳ್ಳ ದಾಟಲು ಯಾವುದೇ ಸಮಸ್ಯೆಯಾಗದು, ಆದರೆ ಮಳೆಗಾಲದಲ್ಲಿ ಶವ ಸಂಸ್ಕಾರಕ್ಕೆ ತೆರಳಲು ತುಂಬಿ ಹರಿಯುವ ಹಳ್ಳದಲ್ಲಿಯೇ ನಡೆದು ಹೋಗುವ ಅನಿವಾರ್ಯತೆ ಇದೆ ಎನ್ನುತ್ತಾರೆ ಗ್ರಾಮಸ್ಥ ಬಸವರಾಜ.
‘ಸ್ಮಶಾನದ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಈ ಕುರಿತು ಮತ್ತು ತೆರಳಲು ದಾರಿ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ಹೇಳಿದ್ದರೂ ಯಾವುದೇ ಪ್ರಯೋಜನೆ ಆಗಿಲ್ಲ’ ಎಂದು ಗ್ರಾಮಸ್ಥ ರಮೇಶ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರ್ ಭೇಟಿ: ಶವಸಂಸ್ಕಾರದ ಸ್ಥಳದ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ತಹಶೀಲ್ದಾರ್ ಅಶೋಕ ಪವಾರ್ ಅವರು ಗ್ರಾಮಸ್ಥರೊಂದಿಗೆ ಮಾತನಾಡಿ ಸಮಸ್ಯೆಯ ಮಾಹಿತಿ ಪಡೆದು, ಸ್ಮಶಾನಕ್ಕೆ ತೆರಳಲು ಅಗತ್ಯ ದಾರಿ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಇಲ್ಲವಾದರೆ ಸ್ಮಶಾನಕ್ಕೆ ಬೇರೆ ಸರ್ಕಾರಿ ಸ್ಥಳವನ್ನು ಗುರುತಿಸಿ ಶವ ಸಂಸ್ಕಾರಕ್ಕಾಗಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.