ADVERTISEMENT

ರಾಯಚೂರು: 15 ದಿನ ಸರ್ಕಾರಿ ಕಚೇರಿಯಲ್ಲಿ ಕಳೆದ ನಾಗರಹಾವು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 14:30 IST
Last Updated 11 ಸೆಪ್ಟೆಂಬರ್ 2025, 14:30 IST
<div class="paragraphs"><p>ನಾಗರಹಾವು</p></div>

ನಾಗರಹಾವು

   

ರಾಯಚೂರು: ಹದಿನೈದು ದಿನಗಳ ಹಿಂದೆ ಮಾವಿನಕೇರಿ ರಸ್ತೆಯಲ್ಲಿರುವ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯೊಳಗೆ ನುಗಿದ್ದ ನಾಗರಹಾವು ಗುರುವಾರ ವಿರಾಟರೂಪ ತೋರಿಸಿ ಸಿಬ್ಬಂದಿನ್ನು ಬೆಚ್ಚಿಬೀಳಿಸಿದೆ.

ಹದಿನೈದು ದಿನಗಳ ಹಿಂದೆ ಬಣ್ಣದ ಟೈಲ್ಸ್‌ ಮೇಲೆ ತೆವಳಿಕೊಂಡು ಕಚೇರಿಯೊಳಗೆ ನುಗ್ಗಿತ್ತು. ಇದನ್ನು ಒಮ್ಮೆಲೇ ನೋಡಿದ ಪ್ರಥಮ ದರ್ಜೆ ಸಹಾಯಕ ವಿನಯಕುಮಾರ ಅವರಿಗೆ ಭಯದಿಂದಾಗಿ ಕಾಲುಗಳಲ್ಲಿನ ಶಕ್ತಿ ಹೊರಟು ಹೋದಂತಾಯಿತು. ಟೈಲ್ಸ್‌ ಬಣ್ಣ ಹೋಲುವ ಹಾವನ್ನು ನೋಡಿ ತಕ್ಷಣ ಸಿಬ್ಬಂದಿಗೂ ತಿಳಿಸಿ ಅಲರ್ಟ್ ಮಾಡಿದರು. ಎಂಟು ಸಿಬ್ಬಂದಿ ಸೇರಿ ಕಚೇರಿಯಲ್ಲಿ ಜಾಲಾಡಿದರೂ ಕಾಣಸಿಕ್ಕಿರಲಿಲ್ಲ.

ADVERTISEMENT

ಮರುದಿನ ಹಾವು ಹಿಡಿಯುವವರನ್ನು ಕಚೇರಿಗೆ ಕರೆಯಿಸಿ ಶೋಧ ನಡೆಸಿದರೂ ಹಾವು ಕಾಣಲಿಲ್ಲ. ಅದು ಕಚೇರಿಯಿಂದಲೂ ಹೊರಗೆ ಹೋಗಿರಲಿಲ್ಲ. ಸಿಬ್ಬಂದಿ ಭಯದಿಂದ ಟೇಬಲ್‌ ಕೆಳಗೆ ಕಾಲುಗಳನ್ನು ಚಾಚಿ ಇಡದೇ ಕುರ್ಚಿಯಲ್ಲಿ ಮಂಡೆಹಾಕಿಕೊಂಡು ಕುಳಿತು ಕೆಲಸ ಮಾಡಿದ್ದರು.

ಹತ್ತು, ಹನ್ನೆರಡು ದಿನ ಆದರೂ ಹಾವು ಕಾಣಿಸದಿದ್ದಾಗ ಅದು ಹೊರಗೆ ಹೋಗಿರಬಹುದು ಎನ್ನುವ ಭ್ರಮೆಯಲ್ಲಿ ಇದ್ದರು. ಆದರೆ, ಅದು ಇಲಿ ಹಾಗೂ ಕಪ್ಪೆಗಳನ್ನು ತಿಂದು ಕಚೇರಿಯ ಕಡತಗಳ ಮಧ್ಯೆ ಆಶ್ರಯ ಪಡೆದಿತ್ತು.

ಗುರುವಾರ, ವಿಕಲಚೇತನರ ಪಾಲಕರ ಒಕ್ಕೂಟದ ಮುಖಂಡ ಹೊನ್ನಪ್ಪ ಗೂಳಪ್ಪನವರ ಕಚೇರಿಗೆ ಬಂದಾಗ ಹಾವು ಮತ್ತೆ ಕಾಣಿಸಿಕೊಂಡಿತು. ಹೊನ್ನಪ್ಪ ತಡಮಾಡದೆ ಎಚ್ಚರಿಕೆಯಿಂದ ಹಾವನ್ನು ಹಿಡಿದು ಮಾವಿನ ಕೆರೆಯ ಬಳಿ ಸುರಕ್ಷಿತವಾಗಿ ಬಿಟ್ಟು ಬಂದರು. ಮಹಿಳಾ ಸಿಬ್ಬಂದಿ ಜೀವಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡಿದ್ದರು. ಹಾವನ್ನು ಹಿಡಿದೊಯ್ದ ನಂತರ ಕಚೇರಿ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.