ADVERTISEMENT

ರಾಯಚೂರು: ಮಾರಕವಾಗಿದ್ದ ‘ಹಾಲಿನ ಪ್ಯಾಕೇಟ್‌’ ಈಗ ಪೂರಕ!

ಒಂದೇ ಕೆಲಸದಿಂದ ಬಹುಉದ್ದೇಶ ಸಾಧನೆ ಆಗುತ್ತಿರುವುದು ವಿಶೇಷ

ನಾಗರಾಜ ಚಿನಗುಂಡಿ
Published 2 ಫೆಬ್ರುವರಿ 2020, 19:30 IST
Last Updated 2 ಫೆಬ್ರುವರಿ 2020, 19:30 IST
ಡಾ.ಸಿ.ಬಿ.ವೇದಮೂರ್ತಿ
ಡಾ.ಸಿ.ಬಿ.ವೇದಮೂರ್ತಿ   

ರಾಯಚೂರು: ಮಣ್ಣಿನೊಂದಿಗೆ ಬೆರೆಯದೆ ಪರಿಸರಕ್ಕೆ ಹಾನಿಕಾರಕವಾಗಿ ಉಳಿದುಕೊಳ್ಳುವ ಹಾಲಿನ ಪ್ಯಾಕೆಟ್‌ಗಳನ್ನು ಸಂಗ್ರಹಿಸಿ, ಅವುಗಳಲ್ಲಿ ವಿವಿಧ ಬೀಜಗಳನ್ನು ನೆಟ್ಟು ಸಸಿಗಳನ್ನು ಬೆಳೆಸುವ ಕಾರ್ಯ ಆರಂಭಿಸಲಾಗಿದೆ.

ಪರಿಸರ ಸಂರಕ್ಷಣೆ ಪಣತೊಟ್ಟಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಈ ವಿನೂತನ ಪ್ರಯೋಗ ಆರಂಭಿಸಿ ಗಮನ ಸೆಳೆದಿದ್ದಾರೆ. ಗ್ರೀನ್‌ ರಾಯಚೂರು, ಜಿಲ್ಲಾಡಳಿತ, ನಗರಸಭೆ, ಶಿಲ್ಪಾ ಫೌಂಡೇಷನ್‌, ಶ್ರೀವಾರಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳು ಈ ಕಾರ್ಯದಲ್ಲಿ ಕೈಜೋಡಿಸಿವೆ.

ಪ್ಲಾಸ್ಟಿಕ್‌ ಹಾಲಿನ ಪ್ಯಾಕೆಟ್‌ ಸಂಗ್ರಹಿಸುತ್ತಿರುವುದರಿಂದ ಸ್ವಚ್ಛತೆ ಕಾರ್ಯ ಸಾಧನೆ ಆಗುತ್ತಿದೆ. ಇದರೊಂದಿಗೆ ಸಂಗ್ರಹಿಸಿದ ಪ್ಲಾಸ್ಟಿಕ್‌ ಪ್ಯಾಕೆಟ್‌ಗಳನ್ನು ಸಸಿಗಳನ್ನು ಬೆಳೆಸುವ ಕಾರ್ಯಕ್ಕೆ ಬಳಕೆ ಮಾಡುವ ಮೂಲಕ ಬಹುವಿಧ ಕಾರ್ಯ ಸಾಧಿಸಿದಂತಾಗಿದೆ. ಜನವರಿ 19 ರಂದು ನಡೆದ ವೇಮನ ಜಯಂತಿ ಆಚರಣೆ ನಿಮಿತ್ತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಸುಮಾರು 10 ಸಾವಿರ ಹಾಲಿನ ಪ್ಯಾಕೆಟ್‌ಗಳಿಗೆ ಮಣ್ಣು ತುಂಬಿಸಲಾಯಿತು.

ADVERTISEMENT

ಜನವರಿ 26 ರಂದು ನಡೆದ ಗಣರಾಜ್ಯೋತ್ಸವ ದಿನದಂದು ಬೀಜಗಳನ್ನು ನೆಡಲಾಗಿದೆ. ಪರಿಸರಕ್ಕೆ ಪೂರಕವಾದ ಈ ಕಾರ್ಯ ನಿರಂತರ ಮುಂದುವರಿಸಲಾಗಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ಕರ್ತವ್ಯದ ಜೊತೆಯಲ್ಲಿಯೆ ಪರಿಸರ ಸಂರಕ್ಷಣೆ ಕಾರ್ಯದಲ್ಲೂ ಎಸ್‌ಪಿ ಅವರು ಗಮನ ಸೆಳೆಯುತ್ತಿದ್ದಾರೆ.

ಪ್ರತಿ ಭಾನುವಾರ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಂಘ–ಸಂಸ್ಥೆಗಳೊಂದಿಗೆ ಸಸಿ ನೆಡುವ ಕಾರ್ಯಕ್ರಮ ಮತ್ತು ಸ್ವಚ್ಛತಾ ಕಾರ್ಯದಲ್ಲಿ ತಪ್ಪದೇ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಪರಿಸರ ಕಾಳಜಿ ಮತ್ತು ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯದಲ್ಲಿ ಮಾದರಿ ಪ್ರಯೋಗಗಳನ್ನು ಡಾ.ಸಿ.ಬಿ. ವೇದಮೂರ್ತಿ ಅವರು ಮಾಡುತ್ತಿದ್ದಾರೆ.

ಹಾಲಿನ ಪ್ಯಾಕೆಟ್‌ ಸಂಗ್ರಹ ಹೇಗೆ?

ಪರಿಸರ ಸಂರಕ್ಷಣೆಗೆ ಪೂರಕವಾಗಿ ಕೈಜೋಡಿಸಿರುವ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಬಗ್ಗೆ ಸೂಚನೆಯೊಂದನ್ನು ನೀಡಲಾಗಿತ್ತು. ಹೆಚ್ಚುಹೆಚ್ಚು ಹಾಲಿನ ಪ್ಯಾಕೆಟ್‌ಗಳನ್ನು ಸಂಗ್ರಹಿಸಿಕೊಂಡು ಬರುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತಿತ್ತು. ಲೇಖನಿ, ನೋಟ್‌ಬುಕ್‌ ಸೇರಿದಂತೆ ಶಿಕ್ಷಣಕ್ಕೆ ಪೂರಕವಾಗುವ ಬಹುಮಾನ ನೀಡಿ ಎಸ್‌ಪಿ ವೇದಮೂರ್ತಿ ಅವರು ಪ್ರೋತ್ಸಾಹಿಸಿದ್ದರಿಂದ ಸಾವಿರಾರು ಹಾಲಿನ ಪ್ಯಾಕೆಟ್‌ಗಳು ಸಂಗ್ರಹವಾಗಿವೆ.

ಅಲ್ಲದೆ, ಹಾಲಿನ ಪ್ಯಾಕೆಟ್‌ಗಳನ್ನು ಅತಿಹೆಚ್ಚು ಬಳಕೆ ಮಾಡುವ ವಸತಿನಿಲಯಗಳು ಮತ್ತು ಹೊಟೇಲ್‌ಗಳಿಂದಲೂ ಸಂಗ್ರಹಿಸಲಾಗಿದೆ. ನವೋದಯ ಕಾಲೇಜು ಕ್ಯಾಂಪಸ್‌ನಲ್ಲಿರುವ ವಸತಿ ನಿಲಯಗಳಿಂದ ಒಂದೇ ವಾರದಲ್ಲಿ ನೂರಾರು ಹಾಲಿನ ಪ್ಯಾಕೆಟ್‌ ಸಂಗ್ರಹಿಸಿ ಒದಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.