ADVERTISEMENT

ಭತ್ತ, ತೊಗರಿ ಖರೀದಿ ಕೇಂದ್ರ ಆರಂಭಿಸಿ

ಲಿಂಗಸುಗೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರಾದೇಶಿಕ ಆಯುಕ್ತರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 8:46 IST
Last Updated 13 ಡಿಸೆಂಬರ್ 2019, 8:46 IST
ಲಿಂಗಸುಗೂರಿಗೆ ಗುರುವಾರ ಭೇಟಿ ನೀಡಿದ್ದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್‌ ಅವರಿಗೆ ರಾಜ್ಯ ರೈತ ಸಂಘದ ಮುಖಂಡರು ಮನವಿ ಸಲ್ಲಿಸಿದರು
ಲಿಂಗಸುಗೂರಿಗೆ ಗುರುವಾರ ಭೇಟಿ ನೀಡಿದ್ದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್‌ ಅವರಿಗೆ ರಾಜ್ಯ ರೈತ ಸಂಘದ ಮುಖಂಡರು ಮನವಿ ಸಲ್ಲಿಸಿದರು   

ಲಿಂಗಸುಗೂರು: ಕೇಂದ್ರ ಸರ್ಕಾರ ಬಹುತೇಕ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡುವ ಮೂಲಕ ತೊಗರಿ, ಭತ್ತ ಖರೀದಿಗೆ ಮುಂದಾಗಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರುಪ್ರಾದೇಶಿಕ ಆಯುಕ್ತ ಸುಬೋಧ ಯಾದವ್‌ ಅವರಿಗೆ ಮನವಿ ಸಲ್ಲಿಸಿದರು.

ಗುರುವಾರ ಭೇಟಿ ನೀಡಿದ್ದ ಸುಬೋಧ ಯಾದವ್‌ ಅವರಿಗೆ ಮನವಿ ಸಲ್ಲಿಸಿದ ರೈತರು, ಕಂದಾಯ ಮತ್ತು ಸರ್ವೆ ಇಲಾಖೆಗಳಲ್ಲಿ ರೈತರ ಕೆಲಸಗಳು ಸಮರ್ಪಕವಾಗಿ, ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಪೋತಿ ವಿರಾಸತ್‌, ವಿವಿಧ ಯೋಜನೆಗಳ ಮಾಸಾಶನದಂತ ಸಣ್ಣ ಪುಟ್ಟ ಕೆಲಸಗಳನ್ನು ಕಂದಾಯ ಅದಾಲತ್‌ ಮೂಲಕ ಆಯಾ ಗ್ರಾಮಗಳಲ್ಲಿಯೆ ಮಾಡಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ರೈತರು ತಮ್ಮ ಜಮೀನುಗಳ ನಕ್ಷೆ, ಹದ್ದುಬಸ್ತು, ಪೋಡಿ ಸೇರಿ ಇತರ ಕೆಲಸಗಳಿಗೆ ನಾಲ್ಕು ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ಟಿಪ್ಪಣಿ, ಟೋಂಚ್‌, ನಕ್ಷೆ ನೆಪದಲ್ಲಿ ಮುಂದೂಡುತ್ತ ಹೊರಟಿದ್ದಾರೆ. ಒಂದೊಂದು ಕೆಲಸಕ್ಕೆ ಕೇಳಿದಷ್ಟು ಹಣ ನೀಡಿದವರಿಗೆ ಮಾತ್ರ ಕೆಲಸ ಮಾಡಿಕೊಡುತ್ತಾರೆ. ಸಾಮಾನ್ಯ ಜನರು ನಿತ್ಯ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು
ಆಗ್ರಹಿಸಿದರು.

ADVERTISEMENT

ಕೇಂದ್ರ ಸರ್ಕಾರ ಭತ್ತಕ್ಕೆ ₹ 1,800 ಮತ್ತು ತೊಗರಿಗೆ ₹ 5,800 ಬೆಂಬಲ ಬೆಲೆ ಘೋಷಣೆ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿ ಭತ್ತ ₹ 1,100 ಹಾಗೂ ತೊಗರಿ ₹ 4,600 ಇದೆ. ಕಾರಣ ರಾಜ್ಯ ಸರ್ಕಾರ ಭತ್ತಕ್ಕೆ ₹ 700 ಪ್ರೋತ್ಸಾಹಧನ ಹಾಗೂ ತೊಗರಿಗೆ ₹ 1,200 ಪ್ರೋತ್ಸಾಹಧನ ನೀಡಿ ಅಗತ್ಯ ಇರುವ ಕಡೆಗಳಲ್ಲಿ ಖರೀದಿ ಕೆಂದ್ರ ಆರಂಭಿಸದೆ ಹೋದರೆ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಉಪ ವಿಭಾಗಾಧಿಕಾರಿ ಡಾ. ದಿಲೀಶ್‌ ಸಸಿ, ತಹಶೀಲ್ದಾರ್‌ ಚಾಮರಾಜ ಪಾಟೀಲ್‌ ರಾಜ್ಯ ರೈತ ಸಂಘದ ಹಿರಿಯ ಮುಖಂಡ ಅಮರಣ್ಣ ಗುಡಿಹಾಳ, ಮುಖಂಡರಾದ ಮಲ್ಲನಗೌಡ ಗೌಡೂರು, ಬಂದೆನವಾಜ, ದುರುಗೇಶ, ಹನುಮಂತ, ದೇವಪ್ಪ, ಅಸ್ಕಿಹಾಳ ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.