ADVERTISEMENT

ಜಿಲ್ಲೆಯ ಅಭಿವೃದ್ಧಿ ಸ್ಪಂದಿಸದ ರಾಜ್ಯ ಬಜೆಟ್

ಐಐಐಟಿ ಸ್ಥಾಪನೆ, ರಾಯಚೂರು ವಿಶ್ವವಿದ್ಯಾಲಯಕ್ಕಾಗಿ ದೊರೆಯದ ಅನುದಾನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 17:33 IST
Last Updated 5 ಜುಲೈ 2018, 17:33 IST
ಮುರಳಿಲೀಡ್‌ ಬ್ಯಾಂಕ್‌ ಮ್ಯಾನೇಜರ್‌
ಮುರಳಿಲೀಡ್‌ ಬ್ಯಾಂಕ್‌ ಮ್ಯಾನೇಜರ್‌   

ರಾಯಚೂರು: ಸಮ್ಮಿಶ್ರ ಸರ್ಕಾರದಲ್ಲಿ ಐದು ಶಾಸಕರ ಪಾಲು ಹೊಂದಿರುವ ರಾಯಚೂರು ಜಿಲ್ಲೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯ ಬಜೆಟ್‌ನಲ್ಲಿ ಅಭಿವೃದ್ಧಿಗಾಗಿ ಅನುದಾನ ಒದಗಿಸುತ್ತಾರೆ ಎಂದು ಜನರು ನಿರೀಕ್ಷಿಸಿದ್ದರು. ಆದರೆ, ಬಜೆಟ್‌ನಲ್ಲಿ ರಾಯಚೂರು ಹೆಸರಿನ ಉಲ್ಲೇಖವೇ ಆಗದಿರುವುದು ತೀವ್ರ ನಿರಾಸೆ ಮೂಡಿಸಿದೆ.

ಜಿಲ್ಲೆಗಾಗಿ ಪ್ರತ್ಯೇಕ ಯಾವುದೇ ಯೋಜನೆ ಬಜೆಟ್‌ನಲ್ಲಿ ಉಲ್ಲೇಖವಾಗಿಲ್ಲ. ಆದರೆ ರಾಜ್ಯಮಟ್ಟದಲ್ಲಿ ಘೋಷಿಸಿರುವ ಯೋಜನೆಗಳಿಂದ ಜಿಲ್ಲೆಯ ಜನರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ಸಹಕಾರ ಬ್ಯಾಂಕು ಮತ್ತು ರಾಷ್ಟ್ರಿಕೃತ ಬ್ಯಾಂಕುಗಳಿಂದ ರೈತರು ಪಡೆದ ಬೆಳೆಸಾಲವನ್ನು ಮನ್ನಾ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದಕ್ಕೆ ಜಿಲ್ಲೆಯ ರೈತ ಸಮುದಾಯದಲ್ಲಿ ಸಂತಸ ಮನೆಮಾಡಿದೆ. ಸಾಲಬಾಕಿ ಉಳಿದು ಅನೇಕ ವರ್ಷಗಳಿಂದ ಚಿಂತೆಯಲ್ಲಿ ಮುಳುಗಿದ್ದ ಬಡ ಹಾಗೂ ಮಧ್ಯಮ ರೈತರು ಚಿಂತೆಯಿಂದ ಹೊರಬಂದು ನಿರಾಳತೆ ಅನುಭವಿಸುವಂತಾಗಿದೆ. ಪ್ರಮುಖವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಬಾಕಿ ಉಳಿಸಿಕೊಂಡಿದ್ದರಿಂದ ಅನುಭವಿಸುತ್ತಿದ್ದ ಅಧಿಕಾರಿಗಳ ಕಿರುಕುಳ ಈ ಮೂಲಕ ತಪ್ಪಿದಂತಾಗಿದೆ ಎನ್ನುವ ಮಾತುಗಳನ್ನು ರೈತರು ಹೇಳುತ್ತಿದ್ದಾರೆ.

ADVERTISEMENT

ಬಡತನ ರೇಖೆಗಿಂತ ಕೆಳಗೆ (ಬಿಪಿಎಲ್‌) ಇರುವ ಕುಟುಂಬದ ಗರ್ಬೀಣಿಯರಿಗೆ ಒಂದು ಸಾವಿರ ಮಾಸಾಶನ ಘೋಷಣೆ ಮಾಡಿರುವುದರಿಂದ ಮಹಿಳೆಯರು ಸಂತುಷ್ಟರಾಗಿದ್ದಾರೆ. ಮಧ್ಯಮವರ್ಗಕ್ಕೆ ಯಾವುದೇ ಅನುಕೂಲಗಳು ಬಜೆಟ್‌ನಲ್ಲಿ ಇಲ್ಲ. ಇಂಧನ ತೆರಿಗೆ ಹೆಚ್ಚಿಸುವ ಮೂಲಕ ಆದಷ್ಟು ಹೆಚ್ಚಿನ ಹೊರೆ ಹೆಚ್ಚಿಸಲಾಗಿದೆ ಎನ್ನುವ ಮಾತುಗಳನ್ನು ನೌಕರರು ಹೇಳುತ್ತಿದ್ದಾರೆ.

ರಾಯಚೂರಿಗೆ ಕೇಂದ್ರ ಸರ್ಕಾರವು ಘೋಷಿಸಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫಾರ್ಮೆಷನ್‌ ಟೆಕ್ನಾಲಾಜಿ (ಐಐಐಟಿ) ಹಾಗೂ ರಾಜ್ಯ ಸರ್ಕಾರವು ಘೋಷಿಸಿರುವ ಹೊಸ ವಿಶ್ವವಿದ್ಯಾಲಯ ಕಾರ್ಯಾರಂಭಗೊಳಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಯಾವುದೇ ಅನುದಾನ ಘೋಷಿಸಿಲ್ಲ. ಜಿಲ್ಲೆಯ ಶೈಕ್ಷಣಿಕ ಪ್ರಗತಿಯನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ. ಬಜೆಟ್‌ನಲ್ಲಿ ಎಲ್ಲಿಯೂ ರಾಯಚೂರು ಜಿಲ್ಲೆಯ ಪ್ರಸ್ತಾಪವೇ ಇಲ್ಲ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.

ಪ್ರಭಾವ ಬೀರದ ಸಚಿವ: ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಪೈಕಿ ಸಿಂಧನೂರು ಮತ್ತು ಮಾನ್ವಿ ಎರಡು ಕ್ಷೇತ್ರಗಳಿಂದ ಜೆಡಿಎಸ್‌ ಶಾಸಕರಿದ್ದಾರೆ. ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಅವರು ಜಿಲ್ಲೆಯ ಅಭಿವೃದ್ಧಿಗಾಗಿ ಅನುದಾನ ಪಡೆಯಲು ಪ್ರಭಾವ ಬೀರಿಲ್ಲ.
ಡಿ.ಎಸ್‌. ಹುಲಗೇರಿ, ಪ್ರತಾಪಗೌಡ ಪಾಟೀಲ ಹಾಗೂ ಬಸನಗೌಡ ದದ್ದಲ ಮೂವರು ಕಾಂಗ್ರೆಸ್‌ ಶಾಸಕರಿದ್ದರೂ ಮುಖ್ಯಮಂತ್ರಿ ಗಮನ ಸೆಳೆದು ನನೆಗುದಿಗೆ

ಬಿದ್ದಿರುವ ಯೋಜನೆಗಳಿಗೆ ಅನುದಾನ ಪಡೆಯುವ ಕೆಲಸ ಮಾಡಿರುವುದಿಲ್ಲ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದ ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಕೊಡುಗೆ ಇಲ್ಲದಿರುವುದು ನಿಜಕ್ಕೂ ಪ್ರಜ್ಞಾವಂತರಲ್ಲಿ ಬೇಸರ ಮೂಡಿಸಿದೆ.

ರೈತರಿಗೆ ಗೊಂದಲ

ಎಷ್ಟು ಸಾಲಮನ್ನಾ ಆಗುತ್ತದೆ. ಯಾವ ಸಾಲ ಮನ್ನಾ ಆಗುತ್ತದೆ ಎನ್ನುವ ಕುರಿತು ಎಲ್ಲ ಕಡೆಗಳಲ್ಲೂ ಚರ್ಚೆಗಳು ಸಾಮಾನ್ಯವಾಗಿದೆ. ಸಾಲಮನ್ನಾ ಎಷ್ಟಾಗುತ್ತದೆ ಎಂಬುದರ ಬಗ್ಗೆ ಸಾಕಷ್ಟು ಗೊಂದಲ ನಿರ್ಮಾಣವಾಗಿರುವುದು ಕಂಡುಬಂತು. ಜಿಲ್ಲೆಯ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾರ್ಚ್‌ 31, 2017 ರವರೆಗೂ ಒಟ್ಟು ₨4,642 ಕೋಟಿ ಸಾಲ ವಿತರಣೆಯಾಗಿದೆ. ಒಟ್ಟು 2,50,732 ರೈತರು ಬೆಳೆಸಾಲ ಪಡೆದಿದ್ದಾರೆ. ಬಹುತೇಕ ರೈತರು ₨ 2 ಲಕ್ಷಕ್ಕಿಂತ ಕಡಿಮೆ ಮೊತ್ತದ ಬೆಳೆಸಾಲವನ್ನೆ ಪಡೆದುಕೊಂಡಿದ್ದಾರೆ. ಒಂದು ವೇಳೆ, ಎರಡು ಲಕ್ಷದವರೆಗೂ ಸಾಲಮನ್ನಾ ಖಚಿತವಾದರೆ ₨4,642 ಸಾಲ ಮನ್ನಾ ಆಗಲಿದೆ.

‘ಸಾಲಮನ್ನಾ ಕುರಿತು ಇನ್ನೂ ಸ್ಪಷ್ಟ ನಿರ್ದೇಶನಗಳು ಬಂದಿಲ್ಲ. ನಿಯಮಗಳನ್ನು ನೋಡಿಕೊಂಡು ರಾಯಚೂರು ಜಿಲ್ಲೆಯಲ್ಲಿ ಎಷ್ಟು ರೈತರ ಹಾಗೂ ಎಷ್ಟು ಮೊತ್ತ ಸಾಲಮನ್ನಾ ಆಗುತ್ತದೆ ಎಂಬುದನ್ನು ಲೆಕ್ಕ ಮಾಡುತ್ತೇವೆ’ ಎಂದು ಜಿಲ್ಲೆಯ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಮುರಳಿ ಅವರು ’ಪ್ರಜಾವಾಣಿ’ಗೆ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.