ADVERTISEMENT

ಹಾಲ್ ಟೆಕೆಟ್ ನಿರಾಕರಣೆ: ವಿದ್ಯಾರ್ಥಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 16 ಮೇ 2019, 12:15 IST
Last Updated 16 ಮೇ 2019, 12:15 IST
ಕುಮಾರ ನಾಯಕ್‌
ಕುಮಾರ ನಾಯಕ್‌   

ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದ ಅಂಬೇಡ್ಕರ್ ಹಾಸ್ಟೆಲ್ ನಲ್ಲಿದ್ದ ಬಿ.ಕಾಂ. ಎರಡನೇ ವರ್ಷದ ವಿದ್ಯಾರ್ಥಿ ಕುಮಾರ ನಾಯಕ್‌ (21) ರಾತ್ರಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗುರುವಾರ ಗೊತ್ತಾಗಿದೆ.

ಹಾಸ್ಟೆಲ್ ಪಕ್ಕದ ಮರಕ್ಕೆ ನೇಣು ಹಾಕಿಕೊಂಡಿದ್ದು, ಪರೀಕ್ಷೆ ಬರೆಯುವುದಕ್ಕೆ ಕಾಲೇಜಿನ ಪ್ರಾಂಶುಪಾಲರು ಹಾಲ್ ಟಿಕೆಟ್ ಕೊಡದಿರುವುದು ಇದಕ್ಕೆ ಕಾರಣ ಎಂದು ಪಾಲಕರು ಆರೋಪಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ‌.

ಮಾನ್ವಿ ತಾಲ್ಲೂಕು ಚಿಕ್ಕದಿನ್ನಿ ಗ್ರಾಮದ ಕುಮಾರ ನಾಯಕ್‌, ಮಾನ್ವಿಯ ಲೋಯೋಲಾ ಪದವಿ ಕಾಲೇಜಿನಲ್ಲಿ ಪಿಯುಸಿಯಿಂದಲೇ ಓದುತ್ತಿದ್ದರು.ಮಾನ್ವಿ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಅದರಲ್ಲಿ ಪಾಲಕರ ಆರೋಪವನ್ನು ಉಲ್ಲೇಖಿಸಿಲ್ಲ.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರಬಾಬು‌ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. 'ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ ದೂರು ದಾಖಲಾಗಿದೆ. ಪಾಲಕರ ಆರೋಪದ ಬಗ್ಗೆ ಆನಂತರ ಪರಿಶೀಲಿಸಲಾಗುವುದು' ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಫಾದರ್‌ ಅರುಣ ಲೂಯಿಸ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಬಿ.ಕಾಂ. ಮೊದಲ ಸೆಮಿಸ್ಟರ್‌ನಿಂದಲೂ ಕುಮಾರ ನಾಯಕ್ ಕ್ಲಾಸ್‌ಗೆ ಸರಿಯಾಗಿ ಬರುತ್ತಿರಲಿಲ್ಲ. ವಿಶ್ವವಿದ್ಯಾಲಯದ ನಿಯಮಾನುಸಾರ ಕಳೆದ ಮಾರ್ಚ್‌ 2 ರಂದು ಪಾಲಕರಿಗೆ ಈ ಬಗ್ಗೆ ನೋಟಿಸ್‌ವೊಂದನ್ನು ಕಳುಹಿಸಲಾಗಿತ್ತು. ಈಗ ನಾಲ್ಕನೇ ಸೆಮಿಸ್ಟರ್‌ನಲ್ಲಿ ಕೇವಲ 17 ದಿನಗಳು ಮಾತ್ರ ಕ್ಲಾಸ್‌ಗೆ ಹಾಜರಿಯಾಗಿದ್ದ. ಕಾಲೇಜಿಗೆ ಗೈರುಹಾಜರಿಯಾಗಿದ್ದ ಒಟ್ಟು ಏಳು ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ ನಿರಾಕರಿಸಲಾಗಿತ್ತು. ನಾಲ್ಕನೇ ಸೆಮಿಸ್ಟರ್‌ ಪರೀಕ್ಷೆ ಆರಂಭದಿಂದಲೂ ಕುಮಾರನಾಯಕ್‌ ಹಾಲ್‌ ಟಿಕೆಟ್‌ ಕೇಳುವುದಕ್ಕೂ ಬಂದಿರಲಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.