ADVERTISEMENT

ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರಾತಿಗೆ ಪ್ರಾಣತ್ಯಾಗಕ್ಕೂ ಸಿದ್ಧ: ಸುಖಾಣಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2023, 16:39 IST
Last Updated 13 ಆಗಸ್ಟ್ 2023, 16:39 IST
ಪಾರಸಮಲ್ ಸುಖಾಣಿ
ಪಾರಸಮಲ್ ಸುಖಾಣಿ   

ರಾಯಚೂರು: ‘ಜಿಲ್ಲೆಗೆ ಏಮ್ಸ್ ಮಂಜೂರಾತಿಗೆ ಒತ್ತಾಯಿಸಿ ಉಗ್ರ ಹೋರಾಟದ ಭಾಗವಾಗಿ ಪ್ರಾಣತ್ಯಾಗ ಮಾಡಲು ಕೂಡ ಸಿದ್ಧವಿದ್ದು, ಏಮ್ಸ್ ವಿಷಯದಲ್ಲಿ ಅನ್ಯಾಯವಾದರೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪಾರಸಮಲ್ ಸುಖಾಣಿ ಎಚ್ಚರಿಸಿದರು.

‘ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕಲಬುರಗಿಯಲ್ಲಿ ಏಮ್ಸ್ ಸ್ಥಾಪಿಸಲು ಸಂಸದರು ಒತ್ತಡ ಹಾಕಬೇಕು ಎಂದು ಹೇಳಿದ್ದಾರೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರೂ ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದರು. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರೂ ಕಲಬುರಗಿಯಲ್ಲಿ ಏಮ್ಸ್ ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದರು. ರಾಯಚೂರು ಕರ್ನಾಟಕದ ಭಾಗವಲ್ಲವೇ?’ ಎಂದು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ರಾಯಚೂರಿಗೆ ಏಮ್ಸ್ ಮಂಜೂರು ಮಾಡುವ ಬಗ್ಗೆ ಕಾಂಗ್ರೆಸ್‌ನ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ ಬರೆದು ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ, ಪಕ್ಷ ಹಾಗೂ ಮುಖ್ಯಮಂತ್ರಿ ನಿರ್ಧಾರದ ವಿರುದ್ಧವಾಗಿ ಸಚಿವರು ಮಾತನಾಡುವುದು ಖಂಡನೀಯ’ ಎಂದರು.

ADVERTISEMENT

‘ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದು ಏಮ್ಸ್ ವಿಷಯದಲ್ಲಿ ಸಚಿವರು ಗೊಂದಲ ಮೂಡಿಸದಂತೆ ಸೂಚಿಸಬೇಕು ಎಂದು ಒತ್ತಾಯಿಸಲಾಗುವುದು. ಈ ಹಿಂದೆ ಐಐಟಿ ವಿಷಯದಲ್ಲೂ ನಂಜುಂಡಪ್ಪ ವರದಿ ಪ್ರಕಾರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟದ ನಿರ್ಧಾರ ಆಗಿದ್ದರೂ ಕಾಂಗ್ರೆಸ್ ಅವಧಿಯಲ್ಲಿ ಮೂರು ಜಿಲ್ಲೆಗಳ ಹೆಸರು ಶಿಫಾರಸು ಮಾಡಿ ಧಾರವಾಡಕ್ಕೆ ಒಯ್ಯಲಾಗಿದೆ. ಈ ಬಾರಿಯೂ ಇಂತಹ ಕುತಂತ್ರ ಮಾಡದಂತೆ ಎಚ್ಚರವಹಿಸಬೇಕು’ ಎಂದು‌‌ ಹೇಳಿದರು.

‘ಜಿಲ್ಲೆಯ ಅಭಿವೃದ್ಧಿಯ ವಿಷಯದಲ್ಲಿ ರಾಯಚೂರಿಗೆ ದೊರೆಯಬೇಕಾದ ಹಲವು ಸೌಲಭ್ಯಗಳನ್ನು ಕಲಬುರಗಿಯ ರಾಜಕಾರಣಿಗಳು ಕೊಂಡೊಯ್ದರೂ ಜಿಲ್ಲೆಯ ರಾಜಕಾರಣಿಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ನವರು ವಿಫಲರಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.