ಹಟ್ಟಿ ಚಿನ್ನದ ಗಣಿ: ಕೃಷ್ಣಾ ನದಿ ಪ್ರವಾಹಕ್ಕೆ ಟಣಮಕಲ್ಲು ಸೇತುವೆ ಸಂಪೂರ್ಣ ಮುಳುಗಿ ಹೋಗಿದೆ.
ನದಿ ದಡದ ಹೊಲ ಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ಬೆಳೆಗಳು ಹಾನಿಯಾಗಿವೆ, ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ರೈತರ ಆಗ್ರಹವಾಗಿದೆ.
ನಾರಾಯಣಪೂರ ಅಣೆಕಟ್ಟೆಯಿಂದ ಕೃಷ್ಣಾನದಿಗೆ 3 ಲಕ್ಷ ಕ್ಯುಸೆಕ್ ನೀರು ಹರಿ ಬಿಟ್ಟ ಪರಿಣಾಮ ನದಿ ದಡದ ಟಣಮಕಲ್ಲು ಸೇತುವೆ ಮುಳುಗಿ ರಸ್ತೆ ಸಂಪರ್ಕ ಬಂದ್ ಆಗಿದೆ. ಇದರಿಂದ ಟಣಮಕಲ್ಲು ಗದ್ದಿಗಿ ಗ್ರಾಮಕ್ಕೆ ತೆರಳುವ ಜನರು ಗುರುಗುಂಟಾ ಗ್ರಾಮದ ಮೂಲಕ ಬರುತ್ತಿದ್ದಾರೆ.
‘ಪ್ರವಾಹ ಬಂದಾಗಲೆಲ್ಲ ಟಣಮಕಲ್ಲು ಸೇತುವೆ ಮುಳುಗಿ ಹೋಗುತ್ತದೆ. ಸೇತುವೆ ಎತ್ತರಕ್ಕೆ ಮಾಡಿ ಈ ಭಾಗದ ಜನರಿಗೆ ಅನುವು ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ ಎನ್ನುತ್ತಾರೆ’ ರೈತ ಸೋಮಣ್ಣ ನಾಯಕ.
ಕೃಷ್ಣಾ ನದಿಗೆ ಅಪಾರ ಪ್ರಮಾಣ ನೀರು ಹರಿಯುತ್ತಿದ್ದು, ಹಟ್ಟಿ ಪಟ್ಟಣಕ್ಕೆ ಸರಬರಾಜು ಮಾಡುವ ಜಾಕ್‌ವೆಲ್ ಹಾಗೂ ಹಟ್ಟಿ ಪ.ಪಂ ಜಾಕ್‌ವೆಲ್ ಸಂಪೂರ್ಣ ಮುಳುಗಿ ಹೋಗಿವೆ. ನದಿ ದಡದ ಗ್ರಾಮದ ಜನರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.