ADVERTISEMENT

ತಾಂಡಾ ನಿವಾಸಿಗಳಿಗೆ ಅನಾರೋಗ್ಯ ಭಾಗ್ಯ!

ಶುದ್ಧ ಕುಡಿಯವ ನೀರಿನ ಸಮಸ್ಯೆ, ಕಿಡ್ನಿಯಲ್ಲಿ ಹರಳು ಇಲ್ಲಿ ಸಾಮಾನ್ಯ 

ಬಸವರಾಜ ಬೋಗಾವತಿ
Published 7 ಜೂನ್ 2019, 19:30 IST
Last Updated 7 ಜೂನ್ 2019, 19:30 IST
ಹೂಲಪ್ಪ, ಬೆಟ್ಟದೂರು ತಾಂಡಾ ನಿವಾಸಿ
ಹೂಲಪ್ಪ, ಬೆಟ್ಟದೂರು ತಾಂಡಾ ನಿವಾಸಿ   

ಮಾನ್ವಿ: ತಾಲ್ಲೂಕಿನ ಕಪಗಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದೂರು ತಾಂಡಾ ಹಾಗೂ ಸುತ್ತಲಿನ ಇತರ ತಾಂಡಾಗಳ ನಿವಾಸಿಗಳು ಶುದ್ಧ ಕುಡಿಯುವ ನೀರಿನ ಕೊರತೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಬಳಲುತ್ತಿರುವುದು ಕಂಡು ಬಂದಿದೆ.

ತಾಂಡಾಗಳ ಕೊಳವೆಬಾವಿಗಳಲ್ಲಿನ ಕುಡಿಯುವ ನೀರಿನಲ್ಲಿ ಫ್ಲೋರೈಡ್‌ ಅಂಶ ಹೆಚ್ಚಾಗಿರುವುದರಿಂದ, ನಿವಾಸಿಗಳು ಹಲವು ವರ್ಷಗಳಿಂದ ಮೂತ್ರಪಿಂಡದಲ್ಲಿ ಹರಳು, ಕೈ ಕಾಲು ಬೇನೆ ಹಾಗೂ ಸೊಂಟದ ನೋವಿನಿಂದ ಬಳಲುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಪೂರೈಕೆ ಹಾಗೂ ಉತ್ತಮ ಆರೋಗ್ಯ ಸೌಲಭ್ಯಕ್ಕಾಗಿ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ನಿರ್ಲಕ್ಷ್ಯವಹಿಸಿರುವ ಬಗ್ಗೆ ತಾಂಡಾ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಟ್ಟದೂರು ತಾಂಡಾ, ಪೂರ್ಯಾ ನಾಯಕ ತಾಂಡಾ, ವೆಂಕಟೇಶ ನಾಯಕ ತಾಂಡಾ, ಭಂಗ್ಯಾ ನಾಯಕ ತಾಂಡಾಗಳ ಪ್ರತಿ ಮನೆಯ ಸದಸ್ಯರು ಮೂತ್ರಪಿಂಡದಲ್ಲಿ ಹರಳು, ಕೈ ಕಾಲು ಬೇನೆ ಮತ್ತು ಸೊಂಟ ನೋವಿನ ತೊಂದರೆಯೆಯಿಂದ ಬಳಲುತ್ತಿರುವುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿಯಾಗಿದೆ.

ADVERTISEMENT

ಬೆಟ್ಟದೂರು ತಾಂಡಾದಲ್ಲಿ ಯಂಕಪ್ಪ, ನಾಗರಾಜ, ರಾಜೇಶ, ಭೂಮಿಕಾ, ಗಣೇಶ, ಲಿಂಗಪ್ಪ, ಶಿವಪ್ಪ, ಲಕ್ಷ್ಮಣ ಈರಣ್ಣ, ಮಲ್ಲೇಶ, ರಮೇಶ, ಅನಂತರಾವ್‌ ಸೇರಿ 25ಕ್ಕೂ ಅಧಿಕ ಜನರು ಮೂತ್ರಪಿಂಡ (ಕಿಡ್ನಿ)ದಲ್ಲಿ ಹರಳಿನ ತೊಂದರೆಯಿಂದ ಹಲವು ವರ್ಷಗಳಿಂದ ಬಳಲುತ್ತಿದ್ದಾರೆ.

ಹೂಲಪ್ಪ, ದಾನಮ್ಮ, ಲಕ್ಷ್ಮೀ ಯಂಕಪ್ಪ, ಮುತ್ತಮ್ಮ, ಡೋಂಗ್ರ್ಯಾ, ಪೋಮ್ಲಮ್ಮ ಲಾಲಪ್ಪ, ಗಂಗಮ್ಮ , ಪಾರ್ವತಿ, ಸೀತಮ್ಮ , ಹೇಮಣ್ಣ ಪೂಜಾರಿ ಸೇರಿ 20ಕ್ಕೂ ಅಧಿಕ ಜನರು ಹಲವು ವರ್ಷಗಳಿಂದ ಕೈ ಕಾಲು ಬೇನೆ, ಸೊಂಟದ ನೋವಿನಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಮಾನ್ವಿ, ರಾಯಚೂರು ಸೇರಿ ವಿವಿಧ ನಗರಗಳ ಅಸ್ಪತ್ರೆಗಳಿಗೆ ಅಲೆದಾಡಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದರೂ ಕೂಡ ಕಾಯಿಲೆ ನಿವಾರಣೆಯಾಗದಿರುವುದು ತಾಂಡಾ ನಿವಾಸಿಗಳಲ್ಲಿ ಬೇಸರ ತರಿಸಿದೆ. ಇನ್ನೂ ಕೆಲವರು ಕಿಡ್ನಿಯಲ್ಲಿ ಹರಳು ಸಮಸ್ಯೆಯ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದಾರೆ ಎಂದು ತಾಂಡಾದ ಹಿರಿಯರು ತಿಳಿಸಿದರು.

ಕೃಷಿ ಕೂಲಿ ಕಾರ್ಮಿಕರಾಗಿ ಬದುಕು ಸವೆಸುತ್ತಿರುವ ಇಲ್ಲಿನ ನಿವಾಸಿಗಳಿಗೆ ಮೂರು ವರ್ಷಗಳ ನಿರಂತರ ಬರಗಾಲದ ಜತೆಗೆ ಅನಾರೋಗ್ಯ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.

ಮೂರು ವರ್ಷಗಳ ಹಿಂದೆ ತಾಂಡಾಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ಗಮನಕ್ಕೆ ತರಲಾಗಿತ್ತು. ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ನಂತರ ಶುದ್ಧ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ತಾಂಡಾ ನಿವಾಸಿಗಳ ಆರೋಪ.

‘10 ವರ್ಷಗಳ ಹಿಂದೆ ತಾಂಡಾದಲ್ಲಿ ಇಬ್ಬರು, ಮೂವರಿಗೆ ಕೈ ಕಾಲು ಬೇನೆ ಸಮಸ್ಯೆ ಕಂಡು ಬಂದಿತ್ತು. ನಂತರ ದದಿನಗಳಲ್ಲಿ ಈ ಕಾಯಿಲೆಗಳಿಂದ ಬಳಲುವರ ಸಂಖ್ಯೆ ಹೆಚ್ಚಾಯಿತು. ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ನೀರಿನಲ್ಲಿ ಫ್ಲೋರೈಡ್‌ ಅಂಶ ಹೆಚ್ಚಾಗಿರುವುದು ಪತ್ತೆಯಾಯಿತು. ಕಾರಣ ತಾಂಡಾಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಆರಂಭಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಯಿತು. ಕಳೆದ ವರ್ಷ ನೂತನ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಗಮನಕ್ಕೆ ತಂದ ನಂತರ ಬೆಟ್ಟದೂರು ತಾಂಡಾ ಮತ್ತು ಪೂರ್ಯಾ ನಾಯಕ ತಾಂಡಾದಲ್ಲಿ ಎರಡು ಶುದ್ಧ ಕುಡಿಯುವ ನೀರು ಪೂರೈಕೆ ಘಟಕಗಳ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ’ ಎಂದು ಸ್ವತ: ಕಿಡ್ನಿಯಲ್ಲಿ ಹರಳಿನ ತೊಂದರೆಯಿಂದ ಹಲವು ವರ್ಷಗಳಿಂದ ಬಳಲುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಹಾಗೂ ತಾಂಡಾ ನಿವಾಸಿ ಯಂಕಪ್ಪ ಕಾರಬಾರಿ ತಿಳಿಸಿದರು.

ಆರೋಗ್ಯ ಇಲಾಖೆ, ತಾಲ್ಲೂಕು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ತಾಂಡಾಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಕಲ್ಪಿಸಬೇಕು. ಕಾಯಿಲೆಪೀಡಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂಬುದು ತಾಂಡಾ ನಿವಾಸಿಗಳ ಒತ್ತಾಯ.

*
ನಮ್ಮ ಕುಟುಂಬದ ನಾಲ್ಕು ಜನರು ಹಲವು ವರ್ಷಗಳಿಂದ ಮೊಣಕಾಲು ಬೇನೆ ಹಾಗೂ ಸೊಂಟ ನೋವಿನಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದಾಡಿ, ದುಡ್ಡು ಖರ್ಚು ಮಾಡಿ ಸಾಕಾಗಿದೆ.
-ಹೂಲಪ್ಪ, ಬೆಟ್ಟದೂರು ತಾಂಡಾ ನಿವಾಸಿ

*
ತಾಂಡಾಗಳಲ್ಲಿ ಆದಷ್ಟು ಬೇಗನೆ ಶುದ್ಧ ಕುಡಿಯುವ ನೀರು ಪೂರೈಕೆಯ ಘಟಕಗಳನ್ನು ಆರಂಭಿಸಲು ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು.
-ಯಂಕಪ್ಪ ಕಾರಬಾರಿ, ಮುಖಂಡ ಬೆಟ್ಟದೂರು ತಾಂಡಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.