ADVERTISEMENT

ದೇಶ ಹಿಂದುಳಿಯಲು ಜಾತಿ ವ್ಯವಸ್ಥೆ ಕಾರಣ: ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 13:47 IST
Last Updated 22 ಮಾರ್ಚ್ 2025, 13:47 IST
ರಾಯಚೂರಿನ ಕನ್ನಡ ಭವನದಲ್ಲಿ ಕೀರ್ತನಾ ಪ್ರಕಾಶನ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಿಲರಾಜ್ ಜಾಗೀರಪನ್ನೂರು ರಚಿಸಿದ ‘ತಲೆಮಾರು’ ಕಾದಂಬರಿಯನ್ನು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಬಿಡುಗಡೆ ಮಾಡಿದರು. ಸಾಹಿತಿ ಬಾಬು ಭಂಡಾರಿಗಲ್, ವೆಂಕಟೇಶ ಬೇವಿನಬೆಂಚಿ, ಜಾಗೃತಿ ದೇಶಮಾನೆ, ಬಿ.ಎಂ.ಪಾಟೀಲ, ಈರಣ್ಣ ಬೆಂಗಾಲಿ ಉಪಸ್ಥಿತರಿದ್ದರು
ರಾಯಚೂರಿನ ಕನ್ನಡ ಭವನದಲ್ಲಿ ಕೀರ್ತನಾ ಪ್ರಕಾಶನ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಿಲರಾಜ್ ಜಾಗೀರಪನ್ನೂರು ರಚಿಸಿದ ‘ತಲೆಮಾರು’ ಕಾದಂಬರಿಯನ್ನು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಬಿಡುಗಡೆ ಮಾಡಿದರು. ಸಾಹಿತಿ ಬಾಬು ಭಂಡಾರಿಗಲ್, ವೆಂಕಟೇಶ ಬೇವಿನಬೆಂಚಿ, ಜಾಗೃತಿ ದೇಶಮಾನೆ, ಬಿ.ಎಂ.ಪಾಟೀಲ, ಈರಣ್ಣ ಬೆಂಗಾಲಿ ಉಪಸ್ಥಿತರಿದ್ದರು   

ರಾಯಚೂರು: ‘ದೇಶದ ಎಲ್ಲ ಅವಘಡಗಳಿಗೆ, ಅಪಮಾನಗಳಿಗೆ ಹಾಗೂ ಹಿಂದುಳಿವಿಕೆಗೆ ಜಾತಿ ವ್ಯವಸ್ಥೆಯೇ ಮುಖ್ಯ ಕಾರಣ’ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ಕನ್ನಡ ಭವನದಲ್ಲಿ ಶನಿವಾರ ಕೀರ್ತನಾ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಿಲರಾಜ್ ಜಾಗೀರಪನ್ನೂರು ಅವರು ರಚಿಸಿದ ‘ತಲೆಮಾರು’ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು.

‘ಜಾತಿ ಪದ್ಧತಿ, ಅಸ್ಪೃಶ್ಯತೆ ಜೀವಂತವಾಗಿರುವ ತನಕ ದೇಶದ ಸರ್ವತೋಮುಖ ಬೆಳವಣಿಗೆ ಅಸಾಧ್ಯ. ನಮ್ಮಲ್ಲಿ ಹರಿಯುವ ರಕ್ತ, ನಾವು ಕುಡಿಯುವ ನೀರು, ಉಸಿರಾಡುವ ಗಾಳಿ, ಜೀವಿಸುವ ನೆಲ ಎಲ್ಲವೂ ಒಂದೇ ಆಗಿದ್ದಾಗ ಮನುಷ್ಯರನ್ನು ಮಾತ್ರ ಜಾತಿಯ ಹೆಸರಿನಲ್ಲಿ ಪ್ರತ್ಯೇಕಿಸುವುದು ಸರಿಯಲ್ಲ’ ಎಂದು ತಿಳಿಸಿದರು.

ADVERTISEMENT

‘ದೇಶದ ಬೆಳವಣಿಗೆಯಲ್ಲಿ ಅತಿಹೆಚ್ಚು ಶ್ರಮವಹಿಸುತ್ತಿರುವ ದಲಿತರಿಗೆ ಅಸ್ಪೃಶ್ಯತೆಯ ಹಣೆಪಟ್ಟಿ ಕಟ್ಟಲಾಗಿದೆ. ಅಸ್ಪೃಶ್ಯತೆ ಆಚರಣೆಗೆ ಕಾನೂನು ಅಡಿಯಲ್ಲಿ ಅವಕಾಶ ಇಲ್ಲವಾದರೂ ಅದರ ಕರಾಳ ಛಾಯೆ ಇಂದಿಗೂ ಮುಂದುವರಿದಿದೆ. ಇದು ಕೆಳ ಸಮುದಾಯಗಳ ಅಭಿವೃದ್ಧಿಗೆ ತೊಡಕಾಗಿದೆ’ ಎಂದು ಹೇಳಿದರು.

‘ದ್ವೇಷ, ಅಸೂಯೆ, ಕಟ್ಟುಪಾಡು ಕಡಿಮೆಯಾದರೆ ಮಾತ್ರ ಅಸ್ಪೃಶ್ಯತೆ ನಿವಾರಣೆ ಸಾಧ್ಯ. ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ನಿಲ್ಲಬೇಕು. ಡಾ.ಬಿ.ಆ‌ರ್.ಅಂಬೇಡ್ಕರ್, ಕನಕದಾಸರು, ಗೌತಮ ಬುದ್ಧ, ಬಸವಣ್ಣ ಸೇರಿ ಅನೇಕ ಮಹನೀಯರು ಹೋರಾಟ ಮಾಡಿದ್ದರೂ ಇಂದಿಗೂ ದೌರ್ಜನ್ಯ ಕಡಿಮೆಯಾಗಿಲ್ಲ. ಇಂಥ ಮಹನೀಯರು ಮತ್ತೆ ಹುಟ್ಟಿ ಬಂದರೂ ದೌರ್ಜನ್ಯ ಕಡಿಮೆಯಾಗುತ್ತದೆ ಎಂಬ ನಂಬಿಕೆ ಯಾರಲ್ಲೂ ಇಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಅಂತರ್ಜಾತಿ ವಿವಾಹಗಳು ಹೆಚ್ಚು ಹೆಚ್ಚು ನಡೆಯಬೇಕು. ಈ ಮೂಲಕ ಸ್ವಲ್ಪ ಮಟ್ಟಿಗಾದರೂ ಅಸ್ಪೃಶ್ಯತೆ ನಿವಾರಣೆಯಾಗಬಲ್ಲದು. ಇಂದಿನ ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣ, ಮಾಧ್ಯಮಗಳಿಂದಾಗಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ’ ಎಂದು ತಿಳಿಸಿದರು.

‘ತಲೆಮಾರು’ ಹೊಸ ಸಂವೇದನೆ, ಹೊಸ ಅಭಿವ್ಯಕ್ತಿಯ ಕಥನವಾಗಿದೆ. ಅರ್ಥಪೂರ್ಣ ಶೀರ್ಷಿಕೆಯ ಮೂಲಕ ಲೇಖಕ ಅನಿಲರಾಜ್ ಪರಿಣಾಮಕಾರಿಯಾಗಿ ಬರಹ ಕಟ್ಟಿಕೊಟ್ಟಿದ್ದಾರೆ. ಶಿಕ್ಷಣ, ವೈಚಾರಿಕತೆ, ಕುಟುಂಬ, ಅಧ್ಯಾತ್ಮ ಇವುಗಳ ನಡುವಿನ ಸಂಘರ್ಷ ಹಾಗೂ ಎರಡು ತಲೆಮಾರಿನ ಘಟನೆ ಬಗ್ಗೆ ವಿಶ್ಲೇಷಿಸಿದ್ದಾರೆ’ ಎಂದು ಬಣ್ಣಿಸಿದರು.

ಸಾಹಿತಿ ಬಾಬು ಭಂಡಾರಿಗಲ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಡೀನ್ ಜಾಗೃತಿ ದೇಶಮಾನೆ, ಭೀಮನಗೌಡ, ಬಿ. ಎಂ.ಪಾಟೀಲ, ಈರಣ್ಣ ಬೆಂಗಾಲಿ, ಲೇಖಕ ಅನಿಲರಾಜ್ ಜಾಗೀರಪನ್ನೂರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.