ರಾಯಚೂರು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 349ನೇ ಆರಾಧನೆ ಮಹೋತ್ಸವದಲ್ಲಿ ಉತ್ತರಾರಾಧನೆ ದಿನ ಗುರುವಾರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ರಾಯರ ಪೂರ್ವಾವತಾರ ಪ್ರಹ್ಲಾದ ರಾಜರ ಉತ್ಸವ ಮೂರ್ತಿಗೆ ಈ ಸಲ ಶ್ರೀರಾಮನ ರೀತಿ ವೇಷಭೂಷಣ ಮಾಡಿದ್ದು ವಿಶೇಷವಾಗಿತ್ತು. ಪುಷ್ಪಾಲಂಕಾರದೊಂದಿಗೆ ಕಂಗೊಳಿಸುತ್ತಿದ್ದ ಮೂರ್ತಿಯು ರಥಾರೂಢ ಆದ ಬಳಿಕ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿದರು.
‘ಆದಷ್ಟು ಬೇಗನೆ ಕೋವಿಡ್ ಮಹಾಮಾರಿ ದೂರವಾಗಲಿ ಎಂದು ರಾಯರನ್ನು ಪ್ರಾರ್ಥನೆ ಮಾಡಲಾಗಿದೆ. ಮುಂಬರುವ 350 ಆರಾಧನಾ ಮಹೋತ್ಸವವನ್ನು ‘ರಾಯರ ಸಂಸ್ಮರಣೋತ್ಸವ’ ಎಂದು ಆಚರಿಸಲು ಸಂಕಲ್ಪ ಮಾಡಿದ್ದು, ವರ್ಷವಿಡೀ ಕಾರ್ಯಕ್ರಮಗಳನ್ನು ಜರುಗಿಸಲು ಯೋಜಿಸಲಾಗಿದೆ’ ಎಂದರು.
ಕೋವಿಡ್ ವ್ಯಾಪಕ ಆಗಿರುವುದರಿಂದ ಮಠದ ಪ್ರಾಕಾರದಲ್ಲಿಯೇ ಮಹಾರಥೋತ್ಸವ ನೆರವೇರಿಸಲಾಯಿತು. ಮಠದ ಸಿಬ್ಬಂದಿ, ಆಚಾರ್ಯರು ಹಾಗೂ ಪಂಡಿತರು ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.