
ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣ ಮುಖ್ಯ ರಸ್ತೆಯು ಕೆಸರು ಗದ್ದೆಯಾಗಿದ್ದು ಮಣ್ಣಿನ ರಸ್ತೆಯಲ್ಲಿ ಜಾರಿ ಬಿದ್ದು ಜನರು ಪರದಾಡುತ್ತಿದ್ದಾರೆ.
ಹಟ್ಟಿ ಪಟ್ಟಣದ ಪಾಮನಕೆಲ್ಲೂರು ಕ್ರಾಸ್‌ನಿಂದ ಕಾಕಾನಗರ ಸೇತುವೆಯುವರೆಗೂ ಜೆಜೆಎಂ ಪೈಪ್‌ಲೈನ್ ಹಾಕಲಾಗುತ್ತಿದೆ. ಮುಖ್ಯ ರಸ್ತೆಯನ್ನು ಅಗೆದು ಮಣ್ಣನ್ನು ಗುತ್ತಿಗೆದಾರ ಹಾಗೇ ಬಿಟ್ಟಿದ್ದಾನೆ. ಒಣಮಣ್ಣು ದೂಳಿನಿಂದ ಜನರು ಪರದಾಡುತ್ತಿದ್ದರು. ಪ.ಪಂ ಮುಖ್ಯಾಧಿಕಾರಿಗೆ ಜನರು ದೂಳು ನಿಯಂತ್ರಣ ಮಾಡಿ ಎಂದು ಮನವಿ ಮಾಡಿದ್ದರು.
ಮುಖ್ಯಾಧಿಕಾರಿ ಗುತ್ತಿಗೆದಾರನ್ನು ಕರೆಸಿ ನಿತ್ಯ ಧೂಳು ಹರಡದಂತೆ ನೀರು ಸಿಂಪಡಣೆ ಮಾಡಿ ಎಂದು ಆದೇಶ ಮಾಡಿದ್ದರು. ಅದರ ಅನ್ವಯ ಗುತ್ತಿಗೆದಾರ ಮುಖ್ಯ ರಸ್ತೆಗೆ ನೀರು ಹಾಕಿದ ಪರಿಣಾಮ, ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಲಾಯಿಸುವಂತಾಗಿದೆ. ಇದೇ ರಸ್ತೆಯಲ್ಲಿ ಸಾಗುವಾಗ ಕೆಸರಿನಲ್ಲಿ ಬೈಕ್ ಗಾಲಿ ಸಿಲುಕಿ ಜಾರಿ ಬಿದ್ದು ಆಸ್ಪತ್ರೆ ಸೇರಿದ ಉದಾಹರಣೆ ಕೂಡ ಇದೆ. ಮಣ್ಣಿನ ರಸ್ತೆಯಿಂದ ಜನರ ನೆಮ್ಮದಿ ಹಾಳಾಗಿದೆ ಎನ್ನುತ್ತಾರೆ ವಾಹನ ಸವಾರರು.
‘ಡಾಂಬರ್ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದೆ. ನಿತ್ಯ ಪಪಂ ಅಧಿಕಾರಿ ಹಾಗೂ ಸಿಬ್ಬಂದಿ ಇದೆ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಾರೆ. ಜನರ ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಸಮಸ್ಯೆ ಬಗ್ಗೆ ಪಪಂ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೆ ಕ್ರಮ ಜರುಗಿಸುತ್ತಿಲ್ಲ, ಇಲ್ಲಿನ ಜನರ ಗೋಳು ಕೆಳುವವರೇ ಇಲ್ಲದಂತಾಗಿದೆ’ ಎಂದು ಬಜ್ಜನಾಯಕ ಆರೋಪ ಮಾಡಿದರು.
ಸಂಬಂಧಪಟ್ಟ ಮೇಲಧಿಕಾರಿಗಳು ಇತ್ತ ಕಡೆ ಗಮನಹರಿಸಿ ರಸ್ತೆ ಮೇಲಿನ ಮಣ್ಣು ತೆರವು ಗೊಳಿಸಿ ಜನರಿಗೆ ಸುಗಮ ಸಂಚಾರಕ್ಕೆ ಅನವು ಮಾಡಿಕೊಡಬೇಕು ಎಂದು ಇಲ್ಲಿನ ಜನರು ಒತ್ತಾಯ ಮಾಡಿದ್ದಾರೆ.
ಹೋರಾಟದ ಎಚ್ಚರಿಕೆ: ಹಟ್ಟಿ ಪಟ್ಟಣಕ್ಕೆ ನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ. ಮುಖ್ಯ ರಸ್ತೆ ಕೆಸರಿನಿಂದ ಕೂಡಿದ್ದು ಮಕ್ಕಳು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮಹಿಳೆಯರು ಸಮಸ್ಯೆ ಎದುರಿಸುತ್ತಿದ್ದಾರೆ. ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದರೆ ಪಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ದಲಿತ ಸಂಘಟನೆಯ ಹಟ್ಟಿ ಘಟಕದ ಅಧ್ಯಕ್ಷ ವಿನೋದಕುಮಾರ ಎಚ್ಚರಿಕೆ ನೀಡಿದ್ದಾರೆ.
ಹಟ್ಟಿ ಪಟ್ಟಣದ ಮುಖ್ಯ ರಸ್ತೆ ಅಗೆದ ಗುತ್ತಿಗೆದಾರ ಮಣ್ಣು ತೆರವುಗೊಳಿಸದಿರುವುದರಿಂದ ಜನರಿಗೆ ಸಮಸ್ಯೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕುಲಾಲ್ ಪೀರ್ ಸಮಾಜ ಸೇವಕ
ಹಟ್ಟಿ ಬಸ್ ನಿಲ್ದಾಣ ಸಂಪೂರ್ಣ ಕೆಸರು ಗದ್ದೆಯಾಗಿದೆ. ನಿತ್ಯ ಇಬ್ಬರು ಬೈಕ್ ಸವಾರರು ಕೆಸರಿನಲ್ಲಿ ಜಾರಿ ಬೀಳುತ್ತಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಪ.ಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕುವೆಂಕಟೇಶ ಗಿರಿ ಹಟ್ಟಿ ನಿವಾಸಿ
ಹಟ್ಟಿ ಮುಖ್ಯ ರಸ್ತೆಗೆ ಧೂಳು ನಿಯಂತ್ರಣಕ್ಕೆ ನೀರು ಹಾಕಿದ್ದರಿಂದ ರಸ್ತೆ ಕೆಸರುಮಯವಾಗಿದೆ. ಜನರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದುಜಗನಾಥ ಪ.ಪಂ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.