ADVERTISEMENT

ಸಿರಿಧಾನ್ಯ ಬೆಳೆ ಪ್ರೋತ್ಸಾಹಿಸಲು ಅಗತ್ಯ ನೆರವು: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 11:13 IST
Last Updated 27 ಆಗಸ್ಟ್ 2022, 11:13 IST
   

ರಾಯಚೂರು: ಕಲ್ಯಾಣ ಕರ್ನಾಟಕದ ಪ್ರತಿ ಜಿಲ್ಲೆಗೆ ಒಂದು ಸಿರಿಧಾನ್ಯ ಗೊತ್ತುಪಡಿಸಿ‌ ಬೆಳೆಯಬೇಕು. ಪ್ರತಿ ಜಿಲ್ಲೆಯಲ್ಲಿ ಸಂಸ್ಕರಣೆ ಘಟಕ‌ ಸ್ಥಾಪಿಸಲಾಗುವುದು. ಸಿರಿಧಾನ್ಯ ಬೆಳೆ ಪ್ರೋತ್ಸಾಹಿಸಲು ಕೆಪೆಕ್ ಸಂಸ್ಥೆಯ ಮೂಲಕ ಎಲ್ಲ ರೀತಿಯ ನೆರವು‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಬಾರ್ಡ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಿರಿಧಾನ್ಯಗಳ ಅಭಿಯಾನ ಉದ್ಘಾಟನೆ ಸಮಾರಂಭದಲ್ಲಿ ಮತನಾಡಿದರು.

'ನಾನು ಕಳೆದ 30 ವರ್ಷಗಳಿಂದ ಅಕ್ಕಿ ಬದಲು ಸಿರಿಧಾನ್ಯವನ್ನೇ ಸೇವಿಸುತ್ತಾ ಬಂದಿದ್ದೇನೆ. ಇದನ್ನು ಎಲ್ಲ‌ಕಡೆಗೂ ಪಸರಿಸಲು ಉತ್ಸುಕನಾಗಿದ್ದೇನೆ. ಶೀಘ್ರ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯ ವ್ಯಾಪಾರ ಮೇಳ ಮಾಡಲಾಗುವುದು' ಎಂದು ತಿಳಿಸಿದರು.

ಈ ಮೇಳದ ನಂತರ 'ರಾಯಚೂರು ಸಿರಿಧಾನ್ಯ ಘೋಷಣೆ'ಗಳನ್ನು ಪ್ರಕಟಿಸುವ ಕೆಲಸವನ್ನು ಕುಲಪತಿ ಮಾಡಬೇಕು. ಸಿರಿಧಾನ್ಯಗಳ ಬಗ್ಗೆ ಗೊತ್ತಿದೆ. ಆದರೆ ಮುಂದೆ ಹೇಗೆ ತೆಗೆದುಕೊಂಡು ಹೋಗಬೇಕು ಎಂಬುದರ ದಾರಿ ಸ್ಪಷ್ಟವಾಗಬೇಕಿದೆ ಎಂದು ಹೇಳಿದರು.

ಕನಕದಾಸರು ಅಂದಿನ ಕಾಲದಲ್ಲೇ ಅಕ್ಕಿ ಮತ್ತು ರಾಗಿ ಕುರಿತು ಉಲ್ಲೇಖಿಸಿದ್ದಾರೆ. ಇರಡು ಧಾನ್ಯಗಳಲ್ಲಿ ರಾಗಿ ಶ್ರೇಷ್ಠ ಎಂಬುದನ್ನು‌ ಹೇಳಿದ್ದಾರೆ ಎಂದರು.

ರಾಯಚೂರು ‌ಒಂದು ಪ್ರಮುಖ‌‌ ಕೃಷಿ ಕೇಂದ್ರ. ರಾಜ್ಯದಿಂದ ಒಂದು ಜವಳಿ ಪಾರ್ಕ್ ಇಲ್ಲಿ ಸ್ಥಾಪಿಸಲಾಗುವುದು. ಕಲಬುರಗಿಯಲ್ಲಿ ಕೇಂದ್ರದ ಜವಳಿ ಸ್ಥಾಪಿಸಲಾಗುವುದು.

ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್‌ ಮಾಡಲಾಗುವುದು ಎಂದು ತಿಳಿಸಿದರು.

ರೈತರ ಹೋಲಗಳು ಸಂಶೋಧನಾ ಕೇಂದ್ರಗಳಾಗಬೇಕು. ಕೃಷಿ ವಿಜ್ಞಾನಿಗಳು ಪ್ರಯೋಗಾಲಯದಿಂದ‌ ಹೊರಬಂದು ಸಂಶೋಧನೆ ‌ಮಾಡಬೇಕು. ನೈಜ ವಾತಾವರಣದಲ್ಲಿ ಇದ್ದು ಸಂಶೋಧನೆ ಮಾಡುವುದನ್ನು ಕೃಷಿ ವಿವಿ ರೂಢಿಸಿಕೊಳ್ಳಬೇಕು. ಕಾರ್ಯಕ್ರಮ ಆಧಾರಿತ, ಹಣ ಆಧಾರಿತ‌ ಸಂಶೋಧನೆಗಿಂತ ರೈತ ಆಧಾರಿತ ಸಂಶೋಧನೆ ಆರಂಭಿಸಬೇಕು. ಇದಕ್ಕೆ ಅಗತ್ಯ ನೆರವು ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ವಿಜ್ಞಾನಿಗಳು ಮನಸ್ಥಿತಿ‌ ಬದಲಾಯಿಸಿಕೊಳ್ಳಬೇಕು ಎಂದು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.