ಹಟ್ಟಿ ಚಿನ್ನದ ಗಣಿ: ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರಿಗೆ ತೊಂದರೆ ಎದುರಾಗಿದೆ.
ಕಾಕಾನಗರ ಸೇತುವೆ ನಿರ್ಮಾಣ ಮಾಡುವಾಗ ಕೋಠಾ, ಬೈಪಾಸ್ ರಸ್ತೆ ನಿರ್ಮಾಣಕ್ಕೆ ₹14 ಲಕ್ಷ ಅನುದಾನ ನೀಡಲಾಗಿತ್ತು. ಗುತ್ತಿಗೆದಾರ ಮರಂ ಹಾಕಿ ಕಾಮಗಾರಿ ಪೂರ್ಣಗೊಳಿಸದೆ ಹಾಗೆ ಬಿಟ್ಟ ಕಾರಣ ಮಳೆ ಬಂದು ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆ ನಿರ್ಮಾಣ ಮಾಡಿ ಎಂದು ಹೋರಾಟಗಾರರು ಹೋರಾಟ ಮಾಡಿದಾಗ ಸ್ಧಳಕ್ಕೆ ಭೇಟಿ ನೀಡಿದ ಅಧಿಕಾರಿಗಳು,‘ಸಿಸಿ ರಸ್ತೆ ನಿಮಾರ್ಣ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿ ಹೋಗಿದ್ದರು. ಆದರೆ ಇಂದಿಗೂ ಭರವಸೆ ಈಡೇರಿಲ್ಲ. ಅನುದಾನ ಹಾಗೆ ಉಳಿದಿದ್ದು, ಗುತ್ತಿಗೆದಾರನ ವಿರುದ್ದ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಹಿಂದೂ ದಲಿತ ಸೇನೆಯ ಜಿಲ್ಲಾಧ್ಯಕ್ಷ ವಿನೋದಕುಮಾರ ಒತ್ತಾಯಿಸಿದ್ದಾರೆ.
ಈ ರಸ್ತೆ ಮೂಲಕ ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳು ತೆರಳುತ್ತಾರೆ. ವಾಹನ ಸವಾರರು ರಸ್ತೆಯಲ್ಲಿ ಹೋಗುವಾಗ ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು ಕೈ ಕಾಲು ಮುರಿದುಕೊಂಡ ಉದಾಹರಣೆ ಕೂಡ ಇದೆ. ಅಧಿಕಾರಿಗಳ ಗಮನಕ್ಕೆ ಹಲವು ಸಲ ತಂದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ಅನುದಾನವನ್ನು ಗುತ್ತಿಗೆದಾರ ಕೊಳ್ಳೆ ಹೊಡೆಯುವ ಹುನ್ನರ ಮಾಡಿದ್ದಾನೆ. ಸರ್ಕಾರದ ನಿಯಮಗಳನ್ನು ಪಾಲಿಸದೆ ಇರುವ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ನಿವಾಸಿ ಸುರೇಶ ಗುರಿಕಾರ ಒತ್ತಾಯ ಮಾಡಿದ್ದಾರೆ.
ಸಂಬಂಧಪಟ್ಟ ಅಧಿಕಾರಗಳು ಸ್ಧಳಕ್ಕೆ ಭೇಟಿ ನೀಡಿ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಲೋಕೋಪಯೋಗಿ ಇಲಾಖೆ ವಿರುದ್ದ ಹೋರಾಟ ನಡೆಸಬೇಕಾಗುತ್ತದೆ ಎಂದು ಕರವೇ ಹಟ್ಟಿ ಘಟಕದ ಅಧ್ಯಕ್ಷ ಮೌನೇಶ ಕಾಕಾನಗರ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.