ADVERTISEMENT

ಏಮ್ಸ್ ಮಂಜೂರು ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 3:06 IST
Last Updated 3 ಅಕ್ಟೋಬರ್ 2020, 3:06 IST
ರಾಯಚೂರಿನ ಮಹಾತ್ಮ ಗಾಂಧಿ ಪುತ್ಥಳಿಯ ಬಳಿ ಸಾಮಾಜಿಕ ಕಾರ್ಯಕರ್ತ ಎಂ.ಕೆ.ಆರ್. ನರೇಂದ್ರ ಆರ್ಯ ಅವರು ಶುಕ್ರವಾರ ಸತ್ಯಾಗ್ರಹ ನಡೆಸಿದರು
ರಾಯಚೂರಿನ ಮಹಾತ್ಮ ಗಾಂಧಿ ಪುತ್ಥಳಿಯ ಬಳಿ ಸಾಮಾಜಿಕ ಕಾರ್ಯಕರ್ತ ಎಂ.ಕೆ.ಆರ್. ನರೇಂದ್ರ ಆರ್ಯ ಅವರು ಶುಕ್ರವಾರ ಸತ್ಯಾಗ್ರಹ ನಡೆಸಿದರು   

ರಾಯಚೂರು: ಜಿಲ್ಲೆಗೆ ಏಮ್ಸ್ (ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಎಂ.ಕೆ.ಆರ್. ನರೇಂದ್ರ ಆರ್ಯ ಅವರು ನಗರದ ಜಿಲ್ಲಾ ಕ್ರೀಡಾಂಗಣ ಬಳಿಯ ಮಹಾತ್ಮಗಾಂಧಿ ಪುತ್ಥಳಿಯ ಬಳಿ ಶುಕ್ರವಾರ ಸತ್ಯಾಗ್ರಹ ಮಾಡಿದರು.

ಆ ನಂತರ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಇದುವರೆಗೆ ಜಿಲ್ಲೆಗೆ ಮಂಜುರಾದ ಹಲವಾರು ಅವಕಾಶಗಳು, ಸೌಲಭ್ಯಗಳು ಬೇರೆ ಜಿಲ್ಲೆಗಳ ಪಾಲಾಗಿವೆ. ಜಿಲ್ಲೆಯು ಹತ್ತಿ, ಭತ್ತ ಬೆಳೆ ಹೆಚ್ಚಾಗಿ ಬೆಳೆಯುವ ಮೂಲಕ ಪ್ರಸಿದ್ಧಿ ಪಡೆದಿದ್ದು, ಆದರೂ ಅಭಿವೃದ್ಧಿಯಲ್ಲಿ ಕಲ್ಯಾಣ ಕರ್ನಾಟಕದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿಗೆ ಗುರಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಅನೇಕ ಸಂಘಟನೆಗಳು, ವಿಚಾರವಾದಿಗಳು ಇದ್ದಾರೆ. ಆದರೆ, ಅಭಿವೃದ್ಧಿಯ ಜವಾಬ್ದಾರಿ ಹೊತ್ತ ರಾಜಕೀಯ ನಾಯಕರು ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಗೆ ಮಂಜುರಾದ ಆಕಾಶವಾಣಿ ವಿಶ್ವವಿದ್ಯಾಲಯ, ಪಿ.ಸಿ.ಬೋರ್ಡ್ ಸೇರಿದಂತೆ ಹಲವಾರು ಯೋಜನೆಗಳು ಕಲಬುರ್ಗಿ ಜಿಲ್ಲೆಯ ಪಾಲಾಗಿವೆ ಎಂದು ಆರೋಪಿಸಿದರು.

ADVERTISEMENT

ಜಿಲ್ಲೆಗೆ ಬರಬೇಕಾದ ಐಐಟಿ ಧಾರವಾಡದ ಪಾಲಾಗಿದೆ. ಹೀಗೆ ಅನ್ಯಾಯ ಮುಂದುವರೆದರೆ ಏಮ್ಸ್ ಸಂಸ್ಥೆಯೂ ಕೈ ತಪ್ಪಲಿದೆ. ಇದಕ್ಕಾಗಿ ಎಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರು, ರಾಜಕೀಯ ನಾಯಕರು ಪಕ್ಷಬೇಧ ಮರೆತು ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.