ADVERTISEMENT

ನಿರುದ್ಯೋಗಿ ನಾಗಮ್ಮ ಈಗ ಉದ್ಯೋಗದರ್ಶಿ!

ಡಿ.ಎಚ್.ಕಂಬಳಿ
Published 7 ಮಾರ್ಚ್ 2020, 19:30 IST
Last Updated 7 ಮಾರ್ಚ್ 2020, 19:30 IST
ನಾಗಮ್ಮ
ನಾಗಮ್ಮ   

ಸಿಂಧನೂರು: ನಿರುದ್ಯೋಗದ ಸಂಕಷ್ಟದಲ್ಲಿ ಮುಳುಗಿದ್ದ ನಗರದ ಸುಕಾಲಪೇಟೆ ಹೋಟೆಲ್‌ ಯಲ್ಲಪ್ಪ ಅವರ ಪುತ್ರಿ ನಾಗಮ್ಮ ಅವರು ಟೇಲರಿಂಗ್‌ ತರಬೇತಿ ಪಡೆದು, ಈಗ 25 ಕ್ಕೂ ಹೆಚ್ಚು ಯುವತಿಯರಿಗೆ ಸ್ವಯಂ ಉದ್ಯೋಗ ಮಾರ್ಗ ತೋರಿಸಿದ್ದಾರೆ.

ಆರಂಭದಲ್ಲಿ ಟೇಲರಿಂಗ್‌ ವೃತ್ತಿಯಿಂದ ಆದಾಯ ಪಡೆಯಲು ಸಾಧ್ಯವಾಗಿರಲಿಲ್ಲ. ಆನಂತರದ ದಿನಗಳಲ್ಲಿ ಅವರ ಶ್ರಮ, ಶ್ರದ್ಧೆ ಹಾಗೂ ಶಿಸ್ತು ಸುತ್ತಮುತ್ತಲಿನ ಜನರಿಗೆ ಇಷ್ಟವಾಯಿತು. ಅಕ್ಕಪಕ್ಕದ ಕಾಲೊನಿಯ ಮಹಿಳೆಯರು ಬಟ್ಟೆ ಹೊಲಿಸಲು ಇವರನ್ನು ಹುಡುಕಿಕೊಂಡು ಬಂದರು. ಕೈತುಂಬ ಕೆಲಸ ಸಿಕ್ಕಿದ ನಂತರ ಬೇರೆ ಯುವತಿಯರಿಗೆ ಟೇಲರಿಂಗ್‌ ತರಬೇತಿ ನೀಡುವುದಲ್ಲದೆ, ಕೆಲವರಿಗೆ ಉದ್ಯೋಗ ಕೂಡಾ ನೀಡಿದ್ದಾರೆ.

ಟೇಲರಿಂಗ್‌ ವೃತ್ತಿ ತರಬೇತಿ ಮತ್ತು ಕೆಲಸಕ್ಕಾಗಿ ಬಾಡಿಗೆ ಕಟ್ಟಡವೊಂದನ್ನು ಪಡೆದಿದ್ದಾರೆ. 10 ವರ್ಷಗಳ ಹಿಂದೆ ಮಾಸಿಕ ₹ 5 ರಿಂದ ₹6 ಸಾವಿರ ಆದಾಯ ಆರಂಭದಲ್ಲಿ ಸಿಗುತ್ತಿತ್ತು. ಪ್ರಸ್ತುತ ₹25 ಸಾವಿರಕ್ಕೂ ಹೆಚ್ಚು ಆದಾಯ ಪಡೆಯುತ್ತಿದ್ದಾರೆ. ನಾಗಮ್ಮ ಅವರಿಂದ ತರಬೇತಿ ಪಡೆದ ಶಾರದಾ, ಅನಿತಾ, ಆರುಂಧತಿ, ಶರಣಮ್ಮ, ಆಶಾಬೇಗಂ, ಅಸಿಬುನ್ನಿಸಾಬೇಗಂ ಅವರು ಸ್ವಂತಃ ಉದ್ಯೋಗ ಕಂಡುಕೊಂಡಿದ್ದಾರೆ. ಯಲ್ಲಮ್ಮ, ಜ್ಯೋತಿಲಕ್ಷ್ಮಿ, ಉಮಾದೇವಿ, ಬೀರಮ್ಮ, ಗೌರಮ್ಮ, ಬಸಮ್ಮ ಪ್ರಸ್ತುತ ತರಬೇತಿ ಪಡೆಯುತ್ತಿದ್ದಾರೆ. ಸಂಕಷ್ಟದಲ್ಲಿದ್ದ ಬಡ ಕುಟುಂಬಗಳ ಮಹಿಳೆಯರು ಹಾಗೂ ಯುವತಿಯರಿಗೆ ತರಬೇತಿ ನೀಡುತ್ತಿದ್ದಾರೆ.

ADVERTISEMENT

‘ನಾನು ವೃತ್ತಿಯಲ್ಲಿ ಏಳಿಗೆ ಕಾಣಲು ತಂದೆ ಯಲ್ಲಪ್ಪ, ತಾಯಿ ನಿಂಗಮ್ಮ, ಅಕ್ಕ ಯಲ್ಲಮ್ಮ ಹಾಗೂ ಪತಿ ರಮೇಶ ಅವರ ಸಹಕಾರ ಕಾರಣ. ಇನ್ನಷ್ಟು ಮಹಿಳೆಯರು, ಯುವತಿಯರಿಗೆ ತರಬೇತಿ ನೀಡುವ ಮೂಲಕ ಬಡತನ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ಆಸರೆಯಾಗಬೇಕೆನ್ನುವುದು ನನ್ನ ಮಹತ್ವಾಕಾಂಕ್ಷೆ’ ಎನ್ನುವುದು ನಾಗಮ್ಮ ರಮೇಶ ಅವರ ಮಾತು.

ಪಿಯುಸಿವರೆಗೂ ಓದಿದ್ದಾರೆ. ಟೇಲರಿಂಗ್ ಡಿಪ್ಲೊಮಾ ಪೂರೈಸಿದ ಸಾಲಮಾಡಿ 6 ಟೇಲರಿಂಗ್ ಮಷಿನ್ ಖರೀದಿಸಿ ಸ್ವತಃ ಟೇಲರಿಂಗ್ ಆರಂಭಿಸಿದರು. ಆನಂತರ ನಿರುದ್ಯೋಗಿ ಯುವತಿಯರಿಗೆ ತರಬೇತಿ ನೀಡಲಾರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.