ADVERTISEMENT

ಗ್ರಾಮಗಳಿಗೆ ಮುಳ್ಳಿನಬೇಲಿ ಲಾಕ್‌ಡೌನ್‌

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 13:46 IST
Last Updated 26 ಮಾರ್ಚ್ 2020, 13:46 IST
ರಾಯಚೂರು ಜಿಲ್ಲೆ ಹಟ್ಟಿ ಸಮೀಪದ ನಿಲೋಗಲ್‌ ಗ್ರಾಮದ ಮುಖ್ಯರಸ್ತೆಗೆ ಮುಳ್ಳಿನ ಬೇಲಿಹಾಕಿ ಲಾಕ್‌ಡೌನ್‌ ಮಾಡಲಾಗಿದೆ
ರಾಯಚೂರು ಜಿಲ್ಲೆ ಹಟ್ಟಿ ಸಮೀಪದ ನಿಲೋಗಲ್‌ ಗ್ರಾಮದ ಮುಖ್ಯರಸ್ತೆಗೆ ಮುಳ್ಳಿನ ಬೇಲಿಹಾಕಿ ಲಾಕ್‌ಡೌನ್‌ ಮಾಡಲಾಗಿದೆ   

ರಾಯಚೂರು: ಹೊರಗಿನ ವ್ಯಕ್ತಿಗಳು ಗ್ರಾಮಕ್ಕೆ ಪ್ರವೇಶಿಸದಂತೆ ಜಿಲ್ಲೆಯ ಕೆಲವು ಗ್ರಾಮಗಳ ಜನರು ಮುಖ್ಯರಸ್ತೆಗೆ ಮುಳ್ಳಿನ ಬೇಲಿ ನಿರ್ಮಿಸಿಕೊಂಡು ಲಾಕ್‌ಡೌನ್‌ ಮಾಡಿಕೊಂಡಿದ್ದಾರೆ.

ರಾಯಚೂರು ತಾಲ್ಲೂಕಿನ ಚಂದ್ರಬಂಡಾ, ಚಿಕ್ಕಮಂಚಾಲಿ, ಕಡಗಮದೊಡ್ಡಿ, ಮಾನ್ವಿ ತಾಲ್ಲೂಕಿನ ಬ್ಯಾಗ್‌ವಾಟ್‌, ಸಿಂಧನೂರು ತಾಲ್ಲೂಕಿನ ದೇವರಗುಡಿ, ದೇವದುರ್ಗ ತಾಲ್ಲೂಕಿನ ಭೂಮನಗುಂಡಾ, ಮಲ್ಲಾಪುರ, ಆಲ್ಕೋಡ, ನೆಲೋಗಲ್‌, ಮಲ್ಲಾಪುರ ಗ್ರಮಗಳ ಜನರು ಬೇಲಿ ನಿರ್ಮಿಸಿಕೊಂಡಿದ್ದಾರೆ.

‘ಹಿಂದಿನ ಕಾಲದಲ್ಲಿ ಗ್ರಾಮಕ್ಕೆ ಸಿಡುಬು ರೋಗ, ಮಲೇರಿಯಾ, ಕಾಲರಾ ಬಾರದಂತೆ ಊರಿಗೆ ಮುಳ್ಳಿನ ಬೇಲಿ ಹಾಕುತ್ತಿದ್ದರು. ಈಗ ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗ ಬಾರದಂತೆ ಬೇಲಿ ಹಾಕಿದ್ದೇವೆ. ವೈದ್ಯಕೀಯ ಪರೀಕ್ಷೆಮಾಡಿಸಿಕೊಳ್ಳದೆ ಯಾರೂ ಗ್ರಾಮಕ್ಕೆ ಬಾರದಂತೆ ಬೇಲಿ ಹಾಕಿದ್ದೇವೆ’ ಎಂದು ಚಂದ್ರಬಂಡಾದ ಯುವಕ ಉಮೇಶ ಹೇಳಿದರು.

ADVERTISEMENT

ಮನೆಮನೆಗೆ ಕಿರಾಣಿ ಸಾಮಗ್ರಿ

ಜಿಲ್ಲೆಯಲ್ಲಿ ಲಾಕ್‌ಡೌನ್‌ ಘೋಷಿಸಿದ್ದರೂ ಜನರು ಕಿರಾಣಿ ಹಾಗೂ ಅಗತ್ಯ ಸರಕು ಖರೀದಿಗೆ ಹೊರಗಡೆ ಬರುವುದು ತಪ್ಪಿಲ್ಲ. ಇದನ್ನು ತಪ್ಪಿಸಲು ಜಿಲ್ಲಾಡಳಿತವು ಮನೆಮನೆಗೆ ಕಿರಾಣಿ ಸಾಮಗ್ರಿ, ತರಕಾರಿ ಹಾಗೂ ಇತರೆ ಅಗತ್ಯ ಸರಕುಗಳನ್ನು ತಲುಪಿಸುವ ವ್ಯವಸ್ಥೆ ಮಾಡುತ್ತಿದೆ.

ರಾಯಚೂರು, ಸಿಂಧನೂರು ಹಾಗೂ ಮಾನ್ವಿಗಳಲ್ಲಿ ವಾರ್ಡ್‌ವಾರು ಸಂತೆ ಸಾಮಗ್ರಿಗಳನ್ನು ಮನೆಗಳಿಗೆ ತಲುಪಿಸುವುದಕ್ಕೆ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಜನರು ಕರೆ ಮಾಡುವುದಕ್ಕೆ ಮೊಬೈಲ್‌ ಸಂಖ್ಯೆ ಇರುವ ಕರಪತ್ರಗಳನ್ನು ಪ್ರತಿ ಮನೆಗೂ ಹಂಚುವ ಕೆಲಸ ಆರಂಭಿಸಲಾಗಿದೆ. ಲಿಂಗಸುಗೂರು, ದೇವದುರ್ಗ, ಮಸ್ಕಿ, ಸಿರವಾರ, ಹಟ್ಟಿಗಳಲ್ಲಿ ಬೆಳಿಗ್ಗೆ 7 ರಿಂದ 11 ರವರೆಗೂ ಅಗತ್ಯ ಸರಕುಗಳ ಸಂತೆಗೆ ಅವಕಾಶ ನೀಡಲಾಗಿದೆ. ಪ್ರತಿಯೊಂದು ಅಂಗಡಿ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್‌ ಮಾಡಲಾಗಿದೆ.

ಗುಳೆ ಹೋದವರ ಆರೋಗ್ಯ ತಪಾಸಣೆ

ಜಿಲ್ಲೆಯಿಂದ ಮುಂಬೈ, ಪುನಾ ಹಾಗೂ ಬೆಂಗಳೂರು ಮಹಾನಗರಗಳಿಗೆ ಗುಳೆ ಹೋಗಿದ್ದ ಜನರು ಗ್ರಾಮಗಳಿಗೆ ವಾಪಸ್ಸಾಗುತ್ತಿದ್ದು, ಇದರಿಂದ ಗ್ರಾಮದ ಜನರಲ್ಲಿ ಭೀತಿ ಆವರಿಸಿದೆ.

ಗೋನವಾಟ್ಲಾ ತಾಂಡಾ, ಸರ್ಜಾಪುರ, ನೀಲುವಂಜಿ ತಾಂಡಾಗಳಿಗೆ ಮರಳಿದ್ದ ಜನರನ್ನು ವೈದ್ಯಕೀಯ ತಪಾಸಣೆ ಮಾಡಿದ ಬಳಿಕವೇ ಊರುಗಳಿಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಗುಳೆ ಹೋಗಿದ್ದ ಜನರು ಗ್ರಾಮದ ಸರ್ಕಾರಿ ಶಾಲೆಯಲ್ಲಿಯೇ ಒಂದು ದಿನ ಕಳೆಯಬೇಕಾಯಿತು. ಗ್ರಾಮದ ಜನರ ದೂರು ಆಧರಿಸಿ ವೈದ್ಯಕೀಯ ತಂಡಗಳು ಗ್ರಾಮಗಳಿಗೆ ಹೋಗಿ ತಪಾಸಣೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.