ADVERTISEMENT

ರಾಯಚೂರು | ಜಿಲ್ಲೆಯಲ್ಲಿ ಪಾಳುಬಿದ್ದ ಪ್ರವಾಸಿ ತಾಣಗಳು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 4:41 IST
Last Updated 29 ಸೆಪ್ಟೆಂಬರ್ 2025, 4:41 IST
ರಾಯಚೂರಿನ ಗುಬ್ಬೇರ ಬೆಟ್ಟದ ಮೇಲಿನ ಸ್ಮಾರಕ ಹಾಗೂ ದೊಡ್ಡ ತೋಪು
ರಾಯಚೂರಿನ ಗುಬ್ಬೇರ ಬೆಟ್ಟದ ಮೇಲಿನ ಸ್ಮಾರಕ ಹಾಗೂ ದೊಡ್ಡ ತೋಪು   

ರಾಯಚೂರು: ರಾಜ್ಯದ ಹಳೆಯ ಜಿಲ್ಲೆಯಾದರೂ ರಾಯಚೂರು ಪ್ರವಾಸೋದ್ಯಮದ ವಿಚಾರದಲ್ಲಿ ಹಿಂದೆ ಬಿದ್ದಿದೆ. ಜಿಲ್ಲೆಯಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳು ಹಾಗೂ ಸ್ಮಾರಕಗಳು ಅನೇಕ ಇದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಪಾಳು ಬಿದ್ದಿವೆ.

ಒಂದು ಕಾಲದಲ್ಲಿ ವೈಭವ ಮೆರೆದ ರಾಜಮನೆತನಗಳ ಕುರುಹುಗಳು ಕೋಟೆ ರೂಪದಲ್ಲಿದ್ದರೂ ರಾಜಕಾರಣಿಗಳ ಹಾಗೂ ಪ್ರಭಾವಿಗಳ ಅತಿಕ್ರಮಣಕ್ಕೆ ನಲುಗಿವೆ. ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ), ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿಯಮಗಳಿಗೆ ಇಲ್ಲಿ ಕವಡೆ ಕಾಸಿನ ಬೆಲೆ ಇಲ್ಲ. ಹೀಗಾಗಿ ಸ್ಮಾರಕಗಳು ಮಹತ್ವ ಕಳೆದುಕೊಂಡು ಪ್ರವಾಸೋದ್ಯಮ ನೆಲ ಕಚ್ಚಿದೆ.

ಸ್ಮಾರಕಗಳ ಸಂರಕ್ಷಣಾ ಸಮಿತಿಗೆ ಜಿಲ್ಲಾಧಿಕಾರಿಯೇ ಅಧ್ಯಕ್ಷರು. ಆದರೆ, ಹಿಂದಿನ ಒಬ್ಬ ಜಿಲ್ಲಾಧಿಕಾರಿಯೂ ಜಿಲ್ಲೆಯ ಅಪರೂಪದ ಸ್ಮಾರಕಗಳನ್ನು ಎಎಸ್‌ಐ ವ್ಯಾಪ್ತಿಗೆ ಕೊಡಲು ಪತ್ರವ್ಯವಹಾರ ಅಥವಾ ಪ್ರಸ್ತಾವ ಸಲ್ಲಿಸಿದ ದಾಖಲೆಗಳಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಒಂದೂ ಎಎಸ್‌ಐ ಸ್ಮಾರಕಗಳಿಲ್ಲ. ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಇದ್ದರೂ ಅಧಿಕಾರಿಗಳಿಲ್ಲ. ಕಾವಲುಗಾರರು ಪ್ರಭಾರ ವಹಿಸಿಕೊಂಡು ಕಚೇರಿ ವ್ಯವಹಾರ ನಡೆಸಿದ್ದಾರೆ.

ADVERTISEMENT

ರಾಯಚೂರಿನ ಕೋಟೆ, ಗುಬ್ಬೇರ ಬೆಟ್ಟ, ಮಲಿಯಾಬಾದ್‌ ಕೋಟೆ, ಮುದಗಲ್‌ ಕೋಟೆ, ಜಲದುರ್ಗ ಕೋಟೆಗಳು ಅಭಿವೃದ್ಧಿ ಕಾಣದೇನೆಲಕ್ಕುರುಳಲು ಶುರು ಮಾಡಿವೆ. ಮಸ್ಕಿಯ ಅಶೋಕನ ಶಿಲಾಶಾಸನದ ಬಳಿ ಕಟ್ಟೆ ನಿರ್ಮಿಸಿದ್ದು ಬಿಟ್ಟರೆ ಬೇರೇನೂ ಅಭಿವೃದ್ಧಿಯಾಗಿಲ್ಲ. ಮುದಗಲ್‌ ಕೋಟೆ ಬಿಟ್ಟರೆ ಬೇರೆ ಕಡೆ ಎಲ್ಲೂ ಕಾವಲುಗಾರರು ಇಲ್ಲ. ಇಲಾಖೆಯಲ್ಲಿ ಸಿಬ್ಬಂದಿ ಇಲ್ಲದ ಕಾರಣ ಪುರಾತತ್ವ ಇಲಾಖೆ ಅಧಿಕಾರಿಗಳೂ ಅಸಹಾಯಕರಾಗಿದ್ದಾರೆ.

ರಾಯಚೂರಿನ ಗುಬ್ಬೇರ ಬೆಟ್ಟದ ಮೇಲಿರುವ ಸ್ಮಾರಕಗಳ ಮೇಲೆ ಗಿಡಗಳು ಬೆಳೆದು ಕಟ್ಟಡಗಳನ್ನು ಶಿಥಿಲಗೊಳಿಸುತ್ತಿದ್ದರೂ ಅವುಗಳನ್ನು ತೆರವುಗೊಳಿಸುವವರಿಲ್ಲ. ಸ್ಮಾರಕದ ಒಳಗೆ ಪೊಲೀಸ್‌ ಇಲಾಖೆ ನಿಯಮಬಾಹಿರವಾಗಿ ವೈಯರ್‌ಲೆಸ್‌ ಕೇಂದ್ರ ಸ್ಥಾಪಿಸಿದೆ. ಕೇಂದ್ರ ಬಸ್‌ ನಿಲ್ದಾಣ ಪಕ್ಕದಲ್ಲಿ ದೊಡ್ಡದಾದ ಶಿಲಾಶಾಸನ ಮಣ್ಣು ಪಾಲಾಗುತ್ತಿದೆ.

ಮಲಿಯಾಬಾದ್ ಹಾಗೂ ನಗರದ ತೀನ್‌ಖಂದಿಲ್ ಬಳಿ ಇರುವ ಕಲ್ಲಾನೆಗಳು ನಾಡಿನ ಸಾಂಸ್ಕೃತಿಕ ಸಿರಿವಂತಿಕೆಯ ಕುರುಹುಗಳಾಗಿವೆ. ಇವುಗಳನ್ನು ಸಂರಕ್ಷಿಸುವ ದಿಸೆಯಲ್ಲಿ ಪ್ರಯತ್ನಗಳೇ ನಡೆದಿಲ್ಲ. ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದರೂ ಅದನ್ನು ಜಿಲ್ಲಾಡಳಿತವೇ ಸರಿಯಾಗಿ ಬಳಸಿಕೊಂಡಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಪ್ರವಾಸೋದ್ಯಮದ ಅಭಿವೃದ್ಧಿಗೆ ನೆರವಾಗಿಲ್ಲ.

‘ಏಪ್ರಿಲ್‌ನಲ್ಲಿ ಜಿಲ್ಲಾಧಿಕಾರಿ ನಿತೀಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಸ್ಮಾರಕಗಳಿರುವ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಾಗೃತಿಯಂಥ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಪ್ರವಾಸೋದ್ಯಮದ ಅಭಿವೃದ್ಧಿಗೆ ಶಾಶ್ವತವಾದ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ರಾಯಚೂರು ಕೋಟೆ ಅಧ್ಯಯನ ಸಮಿತಿ ಕಾರ್ಯದರ್ಶಿ ಹಫೀಜುಲ್ಲಾ ಹೇಳುತ್ತಾರೆ.

ರಾಯಚೂರು ತಾಲ್ಲೂಕಿನ ಮಲಿಯಾಬಾದ್‌ ಕೋಟೆಯೊಳಗೆ ಇರುವ ಕಲ್ಲಾನೆಗಳು / ಚಿತ್ರಗಳು: ಶ್ರೀನಿವಾಸ ಇನಾಮದಾರ್
ರಾಯಚೂರು ಜಿಲ್ಲೆಯ ಮುದಗಲ್‌ ಬೆಟ್ಟದ ಮೇಲಿರುವ ಚಾರ್‌ಮಹಲ್‌ ಅವಶೇಷಗಳು

ಅತಿಕ್ರಮಣಕ್ಕೆ ನಲುಗಿದ ಮುದಗಲ್ ಕೋಟೆ ಹಾಳು ಬಿದ್ದ ಜಲದುರ್ಗ ಕೋಟೆಒತ್ತುವರಿಯಾದರೂ ಕೇಳುವವರಿಲ್ಲ

ರಾಯಚೂರು ತಾಲ್ಲೂಕಿನ ಕುರ್ವಕಲದ ದತ್ತಾತ್ರೇಯ ಪೀಠ ಹಾಗೂ ನಾರದಗಡ್ಡೆ ಅಭಿವೃದ್ಧಿಗೆ ಡಿಪಿಆರ್‌ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ನಜೀರ್‌ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ

ರಾಯಚೂರು ತಾಲ್ಲೂಕಿನಲ್ಲೇ ಅನೇಕ ಅಪರೂಪದ ಸ್ಮಾರಕಗಳಿದ್ದು ಅವುಗಳ ಸಂರಕ್ಷಣೆಗೆ ಜಿಲ್ಲಾಡಳಿತ ಯೋಜನೆ ರೂಪಿಸಬೇಕಿದೆ. ಖಾಸಗಿಯವರ ಸಹಕಾರ ಪಡೆದುಕೊಳ್ಳಬೇಕಿದೆ ಹಫೀಜುಲ್ಲಾ ರಾಯಚೂರು ಕೋಟೆ ಅಧ್ಯಯನ ಸಮಿತಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.