
ರಾಯಚೂರು: ಸೂರ್ಯ ತನ್ನ ಪಥ ಬದಲಿಸಿ, ಮತ್ತೊಂದು ಪಥದಲ್ಲಿ ಚಲಿಸುವ ಕಾಲ ಸಂಕ್ರಮಣ ಪ್ರಯುಕ್ತ ದೇಗುಲಗಳಲ್ಲಿ ಅಭಿಷೇಕ ಹಾಗೂ ವಿಶೇಷ ಪೂಜೆ ನಡೆಯಿತು.
ಜಿಲ್ಲೆಯ ತಂಗಭದ್ರಾ ಹಾಗೂ ಕೃಷ್ಣೆಯ ನದಿ ತಟಗಳಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿ ಸೂರ್ಯದೇವನಿಗೆ ನಮಸ್ಕರಿಸಿದ ನಂತರ ದೇಗುಲಗಳಲ್ಲಿ ದರ್ಶನ ಪಡೆದರು. ನಗರದ ಚಂದ್ರಮೌಳೇಶ್ವರ ದೇವಸ್ಥಾನ, ವಿಷ್ಣು ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಅಧಿಕ ಇತ್ತು.
ಸಂಕ್ರಮಣ ಪ್ರಯುಕ್ತ ಮಂತ್ರಾಲಯ ಸಮೀಪದ ತುಂಗಭದ್ರಾ ನದಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ ಸರತಿ ಸಾಲಿನಲ್ಲಿ ನಿಂತು ರಾಯರ ದರ್ಶನ ಪಡೆದರು. ರಜೆ ಪ್ರಯುಕ್ತ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಸಿದ್ದರು.
ರೈತರು ತಮ್ಮ ಹೊಲದಲ್ಲಿ ಬೆಳೆದ ಹೊಸ ಭತ್ತ ಸೇರಿದಂತೆ ಧಾನ್ಯಗಳ ರಾಶಿ ಮಾಡಿ ಪೂಜೆ ಮಾಡಿದ ನಂತರ ಬಂಧು ಬಳಗದೊಂದಿಗೆ ಸಾಮೂಹಿಕವಾಗಿ ಭೋಜನ ಮಾಡಿ ಸಂತಸ ಹಂಚಿಕೊಂಡರು.
ಅವರೆಕಾಳು, ಸಿಹಿಕುಂಬಳಕಾಯಿ ಇನ್ನಿತರ ಕಾಳು ಬಳಸಿ ಸಿದ್ಧಪಡಿಸಿದ ಖಾದ್ಯ ಸೇವಿಸಿದರು. ನಗರ ಪ್ರದೇಶಗಳಲ್ಲಿ ರೊಟ್ಟಿ ಅಂಗಡಿಗಳಿಂದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಬದನೆಕಾಯಿ, ಪಲ್ಯ , ಮೊಸರು, ಶೇಂಗಾ ಚಟ್ನಿ ಖರೀದಿಸಿ ತಂದು ಮನೆಯಲ್ಲಿ ಹಬ್ಬ ಆಚರಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಬೆಳಿಗ್ಗೆ ಸಗಣಿಯಿಂದ ಅಂಗಳ ಸಾರಿಸಿ ರಂಗೋಲಿ ಬಿಡಿಸಿದ್ದರು. ಅದರ ಮಧ್ಯೆ ಮಣ್ಣಿನ ಉಂಡೆಗಳನ್ನು ಇಟ್ಟು ಅದಕ್ಕೆ ಗಜ್ಜರಿ ಹಾಗೂ ಹೂವು ಇಟ್ಟು ಅಲಂಕರಿಸಿದ್ದರು.
ಕಬ್ಬು, ಬೆಲ್ಲ ಹಾಗೂ ಮೊಸರು ಗಡಿಗೆ ಚಿತ್ರ ಮೂಡಿಸಿ ಗಮನ ಸೆಳೆದರು. ನಗರದಲ್ಲಿ ಮನೆಯಂಗಳಲ್ಲಿ ಆಕರ್ಷಕ ರಂಗೋಲಿ ಚಿತ್ತಾರ ಮೂಡಿಸಿದ್ದರು.
ಮಹಿಳೆಯರು ಹೊಸ ಸೀರೆ ತೊಟ್ಟು ಮನೆ ಮನೆಗೆ ತೆರಳಿ ಬುಂಧು ಮಿತ್ರರಿಗೆ ಎಳ್ಳುಬೆಲ್ಲ ಕೊಟ್ಟು ಶುಭ ಕೋರಿದರು. ಮಕ್ಕಳು ಸಹ ಚಿಕ್ಕ ಡಬ್ಬಿಗಳಲ್ಲಿ ಎಳ್ಳುಬೆಲ್ಲ ತುಂಬಿಕೊಂಡು ಮನೆ ಮೆನೆ ಹೋಗಿ ಎಳ್ಳುಬೆಲ್ಲ ವಿತರಿಸಿದರು. ಯುವಕರು ಹಾಗೂ ಮಕ್ಕಳು ಮೈದಾನಗಳಲ್ಲಿ ಗಾಳಿಪಟ ಹಾರಿಸಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.