ADVERTISEMENT

ತ್ರಯಂಭಕೇಶ್ವರ ಜಾತ್ರೆ: ಏನಿದರ ವಿಶೇಷತೆ? ಇತಿಹಾಸವೇನು?

ಜಾನುವಾರು ಜಾತ್ರೆ, ಎಲ್ಲೆಡೆ ಕುಡಿಯುವ ನೀರಿನ ವ್ಯವಸ್ಥೆ

ಮಂಜುನಾಥ ಎನ್ ಬಳ್ಳಾರಿ
Published 9 ಏಪ್ರಿಲ್ 2022, 19:30 IST
Last Updated 9 ಏಪ್ರಿಲ್ 2022, 19:30 IST
ಕವಿತಾಳದ ತ್ರಯಂಭಕೇಶ್ವರ ದೇವಸ್ಥಾನ
ಕವಿತಾಳದ ತ್ರಯಂಭಕೇಶ್ವರ ದೇವಸ್ಥಾನ   

ಕವಿತಾಳ: ಕವಿತಾಳದ ತ್ರಯಂಭಕೇಶ್ವರ ದೇವಸ್ಥಾನದ ಜಾತ್ರೆ ರಾಮ ನವಮಿಯಂದು ಭಾನುವಾರ (ಏ.10) ವಿಜೃಂಭಣೆಯಿಂದ ಜರುಗಲಿದೆ.

‘ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಮಹಾ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಕುಂಕುಮಾರ್ಚನೆ ಮತ್ತು ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ’ ಎಂದು ಅರ್ಚಕ ಸಿದ್ದಯ್ಯ ಸ್ವಾಮಿ ಹೇಳಿದರು.

ಸಂಜೆ ಪಲ್ಲಕ್ಕಿ ಮತ್ತು ನಂದಿಕೋಲು ಉತ್ಸವದ ನಂತರ ರಥೋತ್ಸವ ಜರುಗಲಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ

ADVERTISEMENT

‘ಕೊವಿಡ್‍ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಜಾತ್ರೆಯನ್ನು ಸರಳವಾಗಿ ಆಚರಿಸಲಾಗಿತ್ತು. ಈ ವರ್ಷ ಜಾತ್ರೆ ಅದ್ದೂರಿಯಾಗಿ ಮತ್ತು ಸುಸೂತ್ರವಾಗಿ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಣ್ಣ ಕವಿತಾಳ ಹೇಳಿದರು.

ಇತಿಹಾಸ: ಕಳಿಂಗ ಮಾದರಿಯ ಕೂಡು ವಿಧಾನದಲ್ಲಿ ಈ ದೇವಸ್ಥಾನ ನಿರ್ಮಿಸಲಾಗಿದ್ದು, ಕ್ರಿ.ಶ.1217ರಲ್ಲಿ ತ್ರಯಂಭಕೇಶ್ವರನ ಪ್ರತಿಷ್ಠಾಪನೆಯಾದ ಬಗ್ಗೆ ಶಾಸನಗಳಿವೆ. ಕವಿತಾಳ ಸೇವಣನೆಂಬ ಅರಸನ ಆಡಳಿತಕ್ಕೆ ಒಳಪಟ್ಟ ಪ್ರದೇಶವಾಗಿತ್ತು. ಇಲ್ಲಿ ಶಂಕರ ರಾಶಿ ಪಂಡಿತ ಎನ್ನುವವರು ಸ್ಥಾನಾಚಾರ್ಯರಾಗಿದ್ದರು ಎಂಬುದು ಇತಿಹಾಸ ಮೂಲಕ ತಿಳಿದು ಬರುತ್ತದೆ.

ಊರಿನ ಮೇಲೆ ಉಂಟಾಗಿದ್ದ ಗ್ರಹಣ ದೋಷ ನಿವಾರಣೆಗಾಗಿ ಪ್ರತಿಯೊಬ್ಬರಿಂದಲೂ ಒಂದೊಂದು ಗದ್ಯಾಣವನ್ನು ಸಂಗ್ರಹಿಸಿ ದೇವಸ್ಥಾನ ನಿರ್ಮಿಸಲಾಯಿತು. ನೂರು ಶೆಟ್ಟಿ ಗುತ್ತರು ಎನ್ನುವ ಮನೆತನದ ರಾಚಶೆಟ್ಟಿ, ಬಾಚಶೆಟ್ಟಿ, ಎನ್ನುವ ಸಹೋದರರು ಮಂದಿರದ ನಂದಾ ದೀವಿಗೆಗಾಗಿ ಗಾಣವನ್ನು ದತ್ತಿ ಕೊಟ್ಟಿದ್ದಾರೆ. ಹೂತೋಟಕ್ಕೆ ಭೂಮಿಯನ್ನು ಕೊಟ್ಟಿರುವ ಬಗ್ಗೆ ಶಾಸನಗಳ ಸಹಾಯದಿಂದ ತಿಳಿಯಬಹುದು.

ಯುಗಾದಿ ಪಾಢ್ಯದಂದು ಸೂರ್ಯನ ಕಿರಣಗಳು ನೇರವಾಗಿ ಗರ್ಭ ಗುಡಿಯಲ್ಲಿರುವ ಲಿಂಗದ ಮೇಲೆ ಬೀಳುವಂತೆ ನಿರ್ಮಿಸಿರುವುದು ಈ ಮಂದಿರದ ವಿಶೇಷತೆ. ಪ್ರಾಚೀನ ಕಾಲದಲ್ಲಿ ಪ್ರಚಲಿತದಲ್ಲಿದ್ದ ವಿದ್ಯಾ ಕೇಂದ್ರಗಳಾದ ಘಟಿಕ, ಅಗ್ರಹಾರ ಮತ್ತು ಬ್ರಹ್ಮಪುರಿ ಎನ್ನುವ ಮೂರು ವಿಧಗಳಲ್ಲಿ ಇಲ್ಲಿ ಅಗ್ರಹಾರ ಕೇಂದ್ರವಿತ್ತು. ಎಲ್ಲಾ ಜಾತಿ ಜನರು ವಿದ್ಯೆ ಕಲಿಯಲು ಅವಕಾಶವಿತ್ತು ಎನ್ನುವುದು ತಿಳಿದು ಬರುತ್ತದೆ.

ಗ್ರಾಮದ ಮಧ್ಯ ಭಾಗದಲ್ಲಿರುವ ದೇವಸ್ಥಾನದ ಪಶ್ಚಿಮಕ್ಕೆ ಮಾವಿನ ತೋಪು (ಆಮ್ರಕುಂಜ) ಮತ್ತು ಪೂರ್ವಕ್ಕೆ ನಳನಳಿಸುವ ಗದ್ದೆಗಳಿದ್ದವು ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ.

ಕರನಾಮ ಸಂವತ್ಸರದಿಂದ ಜಾತ್ರೆ ನಡೆದುಕೊಂಡು ಬಂದಿದೆ ಎನ್ನುವುದು ಹಿರಿಯರ ಅನಿಸಿಕೆ. ಪ್ರತಿವರ್ಷ ರಾಮ ನವಮಿಯಂದು ಜಾತ್ರೆ ಜರುಗುತ್ತದೆ. ಎಲ್ಲಾ ಜಾತಿ ಜನಾಂಗದವರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ ಒಂದು ವಾರಗಳ ಕಾಲ ಜಾನುವಾರು ಜಾತ್ರೆ ನಡೆಯುತ್ತದೆ.

ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಾನುವಾರು ಜಾತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ
- ವಿಶ್ವನಾಥ ಕಾಮರಡ್ಡಿ, ಪ್ರಧಾನ ಕಾರ್ಯದರ್ಶಿ, ದೇವಸ್ಥಾನ ಟ್ರಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.