
ರಾಯಚೂರು: ‘ಬೇಸಿಗೆ ಮುಗಿಯುವ ವೇಳೆಗೆ ತುಂಗಭದ್ರಾ ಅಣೆಕಟ್ಟೆಗೆ ಎಲ್ಲ ಗೇಟ್‌ಗಳನ್ನು ಅಳವಡಿಸಲಾಗುವುದು. ಈ ಭಾಗದ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾದಂತೆ ನೋಡಿಕೊಳ್ಳಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ತುಂಗಭದ್ರೆಯ 30 ಟಿಎಂಸಿ ಅಡಿ ನೀರು ಬಳಸಿಕೊಳ್ಳದ ಕಾರಣ ಹರಿದು ಹೋಗುತ್ತಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ. ಆದರೆ, ಆಂಧ್ರದ ಮುಖ್ಯಮಂತ್ರಿ ಅದಕ್ಕೆ ಅವಕಾಶ ಕೊಡುತ್ತಿಲ್ಲ’ ಎಂದು ತಿಳಿಸಿದರು.
‘ಎಡದಂಡೆ ಕಾಲುವೆಯ ಅಂಚಿನ ವರೆಗಿನ ರೈತರಿಗೂ ನೀರು ಹರಿಯುವಂತಾಗಬೇಕು ಎನ್ನುವ ಬೇಡಿಕೆ ಹಾಗೂ ಒತ್ತಡ ಇದೆ. ಕಾಲುವೆ ನೀರು ದುರ್ಬಳಕೆ ಆಗುವುದನ್ನು ತಡೆಯಲು ಈಗಾಗಲೇ ಕಾಲುವೆ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಮೋಟರ್‌ಗಳ ಬಳಕೆ ಹಾಗೂ ಬೋರ್‌ವೆಲ್ ಕೊರೆಯುವುದನ್ನು ನಿಷೇಧಿಸಲಾಗಿದೆ’ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರುವಿಹಾಳ, ರಾಜ್ಯ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಂಪನಗೌಡ ಬಾದರ್ಲಿ, ಸಂಸದ ಕುಮಾರ ನಾಯಕ, ಶಾಸಕರಾದ ಡಾ.ಶಿವರಾಜ ಪಾಟೀಲ, ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯ ವಸಂತಕುಮಾರ, ಮಲ್ಲಿಕಾರ್ಜುನ ಗೌಡ, ರಾಜಶೇಖರ ರಾಮಸ್ವಾಮಿ, ಪಾಮಯ್ಯ ಮುರಾರಿ, ಪವನ ಕಿಶೋರ ಪಾಟೀಲ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಸಾವಿತ್ರಿ ಪುರುಷೋತ್ತಮ, ಎಸ್.ಆರ್.ರೆಡ್ಡಿ, ಡಾ.ರಮೇಶ, ವಿಷ್ಣಕಾಂತ ಭುತಡಾ ಉಪಸ್ಥಿತರಿದ್ದರು.
‘ಜನರ ಬದುಕಿನಲ್ಲಿ ಬದಲಾವಣೆ’
‘ಪಂಚ ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಜನರ ಬದುಕಿನಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಲಾಗಿದೆ. ಆರನೇ ಗ್ಯಾರಂಟಿ ರೂಪದಲ್ಲಿ ಕಾಲುವೆಗಳಿಗೆ ನೀರು ಹರಿಸುವ ಕಾರ್ಯವನ್ನು ಮಾಡಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. ‘ರಾಯಚೂರು ಶರಣ ದಾಸ ಪರಂಪರೆಯ ಬೀಡಾಗಿದೆ. ರೈತರ ಬದುಕನ್ನು ಕಾಪಾಡಿದೆ. ರಾಜ್ಯಕ್ಕೆ ಬೆಳಕು ಚಿನ್ನ ಸೋನಾ ಮಸೂರಿ ಹತ್ತಿ ಕೊಡುತ್ತಿರುವ ಪ್ರಮುಖ ಜಿಲ್ಲೆಯಾಗಿದೆ. ಕಲೆ ಸಂಸ್ಕೃತಿ ಪರಂಪರೆ ಬೀಡಾಗಿದೆ. ರಾಯಚೂರು ಜಿಲ್ಲಾ ಉತ್ಸವ ಇದಕ್ಕೆ ಇನ್ನಷ್ಟು ಮೆರುಗು ತುಂಬಿದೆ’ ಎಂದು ಬಣ್ಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.