ಕವಿತಾಳ ಸಮೀಪದ ಜಂಗಮರಹಳ್ಳಿಯ ವಿದ್ಯಾರ್ಥಿನಿ ಸ್ನೇಹಾ ಹಾಗೂ ಅವರ ಪಾಲಕರನ್ನು ಗ್ರಾಮಸ್ಥರು ಸನ್ಮಾನಿಸಿದರು
ಕವಿತಾಳ (ರಾಯಚೂರು ಜಿಲ್ಲೆ): ಟೇಲರಿಂಗ್ ಮಾಡಿ ಕಾಲೇಜಿನ ಶುಲ್ಕ ಪಾವತಿಸಿದ್ದ ಮಸ್ಕಿ ತಾಲ್ಲೂಕಿನ ಜಂಗಮರಹಳ್ಳಿ ಗ್ರಾಮದ ಅವಳಿ ಸಹೋದರಿಯರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಸಾಧನೆಗೆ ಬಡತನ ಅಡ್ಡಿಯಾಗದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಗ್ರಾಮದ ಲಕ್ಷ್ಮಿ ಹಾಗೂ ಅಯ್ಯಣ್ಣ ದಂಪತಿ ಅವಳಿ ಪುತ್ರಿಯರಲ್ಲಿ ಸ್ನೇಹಾ ಶೇ 95 ಅಂಕ ಪಡೆದು ಮಸ್ಕಿ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದರೆ, ಸಿಂಧು ಶೇ 94ರಷ್ಟು ಅಂಕ ಪಡೆದಿದ್ದಾರೆ.
ಜಂಗಮರಹಳ್ಳಿಯ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿಯವರೆಗೆ ಹಾಗೂ 9, 10ನೇ ತರಗತಿಯನ್ನು ಮಸ್ಕಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತ ಸಹೋದರಿಯರು ಹತ್ತನೇ ತರಗತಿಯಲ್ಲೂ ಕ್ರಮವಾಗಿ ಶೇ 95 ಮತ್ತು ಶೇ 94 ಅಂಕ ಗಳಿಸಿದ್ದರು. ಇದೀಗ ದ್ವಿತೀಯ ಪಿಯುಸಿಯಲ್ಲೂ ಅದೇ ಪರಂಪರೆ ಮುಂದುವರಿಸಿದ್ದಾರೆ.
ಕುಟುಂಬದ ಬಡತನ ಪರಿಸ್ಥಿತಿ, ಹಣಕಾಸಿನ ತೊಂದರೆಯಿಂದ ಹತ್ತನೇ ತರಗತಿ ಪೂರೈಸಿದ ನಂತರ ಶಿಕ್ಷಣ ಮೊಟಕುಗೊಳಿಸಿ ಮನೆಯಲ್ಲಿಯೇ ಟೇಲರಿಂಗ್ ಮಾಡುವ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದರು. ಬಾಲಕಿಯರ ಕಲಿಕಾ ಆಸಕ್ತಿ ಗುರುತಿಸಿದ ಹಾಲಾಪುರದ ಜನನಿ ಖಾಸಗಿ ಕಾಲೇಜಿನ ಪ್ರಾಚಾರ್ಯರು ಶುಲ್ಕದಲ್ಲಿ ರಿಯಾಯಿತಿ ನೀಡುವುದಾಗಿ ಪಾಲಕರ ಮನವೊಲಿಸಿ ಕಾಲೇಜಿಗೆ ಪ್ರವೇಶ ನೀಡಿದ್ದರು.
ಬಾಲಕಿಯರ ಸಾಧನೆಗೆ ಮೆಚ್ಚುಗೆ ಸೂಚಿಸಿರುವ ಪ್ರಾಚಾರ್ಯ ನಾಗೇಶ, ‘ನಮ್ಮ ನಿರೀಕ್ಷೆಯನ್ನು ಮಕ್ಕಳು ಹುಸಿಗೊಳಿಸಲಿಲ್ಲ’ ಎಂದು ಸಂತಸ ವ್ಯಕ್ತಪಡಿಸಿದರು.
ಮುಂದೆ ಬಿ.ಕಾಂ ಪದವಿ ಜತೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಚಾರ್ಟೆಂಡ್ ಅಕೌಂಟೆಂಟ್ (ಸಿಎ)ಗೆ ತಯಾರಿ ನಡೆಸುವ ಗುರಿ ಇಟ್ಟುಕೊಂಡಿದ್ದಾಗಿ ಹೇಳುವ ಸ್ನೇಹಾ ಮತ್ತು ಸಿಂಧು ಅವರು, ಟೇಲರಿಂಗ್‌ನಿಂದ ಬರುವ ಹಣದಲ್ಲಿ ಶಿಕ್ಷಣ ಮುಂದುವರಿಸುವ ಇಚ್ಛೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.