ADVERTISEMENT

ಟಿಎಲ್‌ಬಿಸಿ ಕೊನೆ ಭಾಗಕ್ಕೆ ನೀರು ಹರಿಸಲು ಒತ್ತಾಯ

ಶಾಸಕದ್ವಯರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಭೇಟಿಯಾದ ರೈತರು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 14:09 IST
Last Updated 15 ಅಕ್ಟೋಬರ್ 2018, 14:09 IST

ರಾಯಚೂರು: ತುಂಗಭದ್ರ ಜಲಾಶಯದಿಂದ ಎಡದಂಡೆ ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ಒದಗಿಸದಿರುವುದನ್ನು ಖಂಡಿಸಿ ರೈತರು ಶಾಸಕದ್ವಯರ ನೇತೃತ್ವದಲ್ಲಿ ಜಿಲ್ಲಾಧಿಕಾರಿಬಿ.ಶರತ್ ಎದುರು ಸೋಮವಾರ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರಾದ ಡಾ.ಶಿವರಾಜ ಪಾಟೀಲ ಹಾಗೂ ಬಸನಗೌಡ ದದ್ದಲ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ಕಾಲುವೆಯ ಕೊನೆ ಭಾಗದ ರೈತರು ಮೈಲ್‌ 104ರಲ್ಲಿ ಗೇಜ್ ನಿರ್ವಹಣೆ ಮಾಡಿ ಬೆಳೆಗಳಿಗೆ ನೀರು ಒದಗಿಸಬೇಕು ಎಂದು ಪಟ್ಟು ಹಿಡಿದರು.

ಜಿಲ್ಲಾಡಳಿತದ ಸಭಾಂಗಣದಲ್ಲಿ ಜಮಾಯಿಸಿದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶಭರಿತ ಜೋರು ಧ್ವನಿಯಲ್ಲಿ ಮಾತನಾಡಿದರು. ಪೊಲೀಸರು ಜೋರು ಮಾತನಾಡದಂತೆ ರೈತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಈ ಹಂತದಲ್ಲಿ ಸಭಾಂಗಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ADVERTISEMENT

ಪ್ರತಿ ಬಾರಿಯೂ ಹೋರಾಟ ಮಾಡಿ ನೀರು ಪಡೆಯುವಂತಾಗಿದೆ. ಅಧಿಕಾರಿಗಳು ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.

ಬಸನಗೌಡ ದದ್ದಲ ಮಾತನಾಡಿ, ನೀರು ನಿರ್ವಹಣೆ ಮಾಡಿ ನೀರು ಒದಗಿಸಲು ಅಧಿಕಾರಿಗಳಿಗೆ ಆಗುತ್ತಿಲ್ಲ. ಹಲವು ಬಾರಿ ಗಮನಕ್ಕೆ ತಂದರೂ ಕ್ರಮವಾಗುತ್ತಿಲ್ಲ. ಆದರೆ, ರೈತರನ್ನೇ ಸಮಾಧಾನ ಪಡಿಸುವ ಕೆಲಸ ಮಾಡಲಾಗುತ್ತಿದೆ. ರೈತರಿಗೆ ಆಗುತ್ತಿರುವ ಅನ್ಯಾಯವಾಗುತ್ತಿದ್ದರೂ ಅಧಿಕಾರಿಗಳು ಕ್ರಮ ಜರುಗಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಡಾ.ಶಿವರಾಜ ಪಾಟೀಲ ಮಾತನಾಡಿ, ಬೆಳೆಗಳಿಗೆ ಉಳಿಸಲು ಹಾಗೂ ಜನರಿಗೆ ಕುಡಿಯಲು ನೀರು ಒದಗಿಸಬೇಕಾದ ಅಧಿಕಾರಿಗಳು ನೀರು ಒದಗಿಸದಿದ್ದರೆ ಹೇಗೆ. ಬೆಳಿಗಳಿಗೆ ನೀರು ಒದಗಿಸದಿದ್ದರೆ ಎಕರೆಗೆ ₹8 ಸಾವಿರದಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕೊನೆ ಭಾಗದಲ್ಲಿನ ಬೆಳೆಗಳು ಉಳಿಯಲು ಕನಿಷ್ಟ ಪಕ್ಷ 10 ದಿನಗಳಾದರೂ ನೀರು ಒದಗಿಸಲು ಅಧಿಕಾರಿಗಳು ಮುಂದಾಗಬೇಕು. ಕಳೆದ ವರ್ಷ ನೀರು ಇಲ್ಲದಾಗ ನೀರು ತಂದಿದ್ದು, ಈ ಬಾರಿ ನೀರು ಇದ್ದರೂ ನದಿಗೆ ಬಿಡಲಾಗುತ್ತಿದೆ. ಕಾಲುವೆಗೆ ಹರಿಸುತ್ತಿಲ್ಲ ಎಂದರು.

ಅಧಿಕಾರಿಗಳು, ರೈತ ಮುಖಂಡರು ಹಾಗೂ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.