ADVERTISEMENT

ಕನಿಷ್ಠ ವೇತನ ಜಾರಿಗೆ ಒತ್ತಾಯ

ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 12:52 IST
Last Updated 1 ಜುಲೈ 2019, 12:52 IST
ರಾಯಚೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಸದಸ್ಯರು ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಸದಸ್ಯರು ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಗ್ರಾಮ ಪಂಚಾಯಿತಿಯ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಸೌಲಭ್ಯ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಸೋಮವಾರ ಪ್ರತಿಭಟನೆ ನಡೆಸಿದರು.

30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಆರಂಭದಲ್ಲಿ ಎಂಟು ತಾಸುಗಳ ಕೆಲಸಕ್ಕಾಗಿ ₹2,500 ಗೌರವಧನ ಕೊಡಲಾಗುತ್ತಿತ್ತು. ಆನಂತರ ₹5,500 ವರೆಗೆ ಗೌರವಧನ ಹೆಚ್ಚಿಸಲಾಗಿದೆ. 2016ರ ಆಗಸ್ಟ್‌ನಲ್ಲಿ ಕಾರ್ಮಿಕ ಇಲಾಖೆಯು ₹13,200 ಕನಿಷ್ಠ ವೇತನ ನಿಗದಿ ಮಾಡಿದ್ದು, ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸಿದೆ. ಈ ನಿಯಮದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಗ್ರಂಥಾಲಯದ ಸಮಯವನ್ನು ನಾಲ್ಕು ತಾಸುಗಳಿಗೆ ಬದಲಾವಣೆ ಮಾಡಿ, ₹7 ಸಾವಿರ ಗೌರವಧನ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕನಿಷ್ಠ ವೇತನ ಆದೇಶವನ್ನು ತಡೆಹಿಡಿಯಲಾಗಿದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದರು.

ಕನಿಷ್ಠ ವೇತನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ, ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಅನೇಕ ಮೇಲ್ವಿಚಾರಕರು ನಿವೃತ್ತಿ ಹೊಂದಿದ್ದು, ಇನ್ನೂ ಸಾವಿರಾರು ಮೇಲ್ವಿಚಾರಕರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಆದರೆ, ಗ್ರಂಥಾಲಯ ಇಲಾಖೆಯಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ಮೇಲ್ವಿಚಾರಕರಿಗೆ ಕುಟುಂಬ ನಿರ್ವಹಣೆ ಮಾಡಿಕೊಂಡು ಹೋಗುವುದು ಕಷ್ಟವಾಗಿದೆ ಎಂದು ದೂರಿದರು.

ADVERTISEMENT

ಹಾವೇರಿಯ ಜಿಲ್ಲೆಯ ಯಲ್ಲಪ್ಪ ದೇವಗಿರಿ, ಉಮೇಶ ಬಣಕಾರ, ಬೆಳಗಾವಿಯ ಸಂತೋಷ ಮಾಳಿ, ಧಾರವಾಡದ ನಾಗರಾಜ ನೀರಲಗಿ, ಶಂಭೂ ಮಲ್ಲನಗೌಡ ಹಾಗೂ ಶಿವಮೊಗ್ಗದ ಚಂದ್ರನಾಯಕ ಅರೇಕೊಪ್ಪ, ತಾಸಿನ್‌ ಬಾಬು ಸೇರಿದಂತೆ ಅನೇಕರು ಈ ವಿಷಯದಲ್ಲಿ ಜಿಗುಪ್ಸೆಗೊಂಡು ಪ್ರಾಣಹಾನಿ ಮಾಡಿಕೊಂಡಿದ್ದಾರೆ.

ಇದೇ ವರ್ಷದ ಜೂನ್ 24ರಂದು ಚಿಕ್ಕಬಳ್ಳಾಪುರದ ಆರ್.ರೇವಣಕುಮಾರ ವಿಧಾನಸೌಧದ ಮಹಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದೆಲ್ಲ ಸರ್ಕಾರಕ್ಕೆ ಗೊತ್ತಿರುವ ವಿಚಾರವಾಗಿದೆ. ಆದ್ದರಿಂದ ಮೊದಲಿನಂತೆ ಎಂಟು ತಾಸು ಸಮಯ ನಿಗದಿ ಮಾಡಿ ಕನಿಷ್ಠ ವೇತನ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಜಿಲ್ಲೆಯ ಎಲ್ಲ ಮೇಲ್ವಿಚಾರಕರು ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿ ಎದುರು ಪ್ರತಿಭಟನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಆಗ ಸಾವಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಪಂಪನಗೌಡ ಪಾಟೀಲ ಕಲ್ಲೂರು, ಉಪಾಧ್ಯಕ್ಷ ಹನುಮನಗೌಡ ಬೂಪೂರು, ನಾಗರಾಜ ಜಾಲಿಹಾಳ, ಕಮಲಮ್ಮ, ದೀಪಾ, ತಿಮ್ಮಪ್ಪ ನಾಯಕ ಕಮಲಾಪುರ, ನರಸಪ್ಪ, ಶಿವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.