ADVERTISEMENT

ಈಶ್ವರಪ್ಪ ಮುಸ್ಲಿಂ ಜನರ ಕ್ಷಮೆ ಯಾಚಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 13:14 IST
Last Updated 20 ಏಪ್ರಿಲ್ 2019, 13:14 IST

ರಾಯಚೂರು: ಮುಸ್ಲಿಂ ಜನಾಂಗದವರು ಹತ್ತು ವರ್ಷ ಪಕ್ಷದ ಕಚೇರಿಯಲ್ಲಿ ಕಸಗೂಡಿಸಿದರೆ, ಅಂಥವರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಬೇಕೋ ಇಲ್ಲವೋ ಎಂಬುದನ್ನು ಆಲೋಚನೆ ಮಾಡಲಾಗುವುದು ಎಂದು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಟಿಪ್ಪು ಸುಲ್ತಾನ ಸಂಘಟನೆ ಮುಖಂಡ ಸೈಯದ್ ಫಾರುಕ್ ಖಾಜಿ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರಮೋದಿ ಸಬ್‌ ಕಾ ಸಾಥ್‌ ಸಬ್ ಕಾ ವಿಕಾಸ ಎಂಬ ಮಾತನ್ನಾಡಿದರೆ ಈಶ್ವರಪ್ಪ ಮುಸ್ಲಿಂ ಜನಾಂಗದವರ ಸ್ವಾಭಿಮಾನಕ್ಕೆ ಧಕ್ಕೆ ತರುವ ಮಾತುಗಳಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಒಂದು ಕೋಟಿ ಜನಸಂಖ್ಯೆ ಹೊಂದಿರುವ ಮುಸ್ಲಿಂ ಜನಾಂಗಕ್ಕೆ ಅವಮಾನ ಮಾಡಲಾಗಿದೆ. ಆದ್ದರಿಂದ ಈಶ್ವರಪ್ಪ ಹೇಳಿಕೆಯ ಬಗ್ಗೆ ಬಿಜೆಪಿ ರಾಜ್ಯ ಅಧ್ಯಕ್ಷರು ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ADVERTISEMENT

ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಹೈದರಾಬಾದ್ ಕರ್ನಾಟಕ ಅಧ್ಯಕ್ಷ ಇಮ್ರಾನ್ ಬಡೇಸಾಬ್ ಮಾತನಾಡಿ, ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ನೀಡಿದೆ. ಆದರೆ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡು ಸಮಾಜವನ್ನು ಒಡೆಯುವ ಈಶ್ವರಪ್ಪನನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಇಲ್ಲದಿದ್ದರೆ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದರು.

ಸೈಯದ್ ಮಹ್ಮದ್, ಜೈಭೀಮ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.