ADVERTISEMENT

ರಾಯಚೂರು ವಿಶ್ವವಿದ್ಯಾಲಯ ಆರಂಭಕ್ಕೆ ಒತ್ತಾಯ

ವಿಶ್ವವಿದ್ಯಾಲಯ ಹೋರಾಟ ಸಮಿತಿ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 13:27 IST
Last Updated 17 ಜನವರಿ 2019, 13:27 IST
ರಾಯಚೂರಿನಲ್ಲಿ ಗುರುವಾರ ರಾಯಚೂರು ವಿಶ್ವವಿದ್ಯಾಲಯ ಆರಂಭಿಸಲು ಒತ್ತಾಯಿಸಿ ರಾಯಚೂರು ವಿಶ್ವವಿದ್ಯಾಲಯ ಹೋರಾಟ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಗುರುವಾರ ರಾಯಚೂರು ವಿಶ್ವವಿದ್ಯಾಲಯ ಆರಂಭಿಸಲು ಒತ್ತಾಯಿಸಿ ರಾಯಚೂರು ವಿಶ್ವವಿದ್ಯಾಲಯ ಹೋರಾಟ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ರಾಯಚೂರು: ಯಾದಗಿರಿ ಜಿಲ್ಲೆಯನ್ನೊಳಗೊಂಡ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಕಾನೂನಾತ್ಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ವಿಶ್ವವಿದ್ಯಾಲಯವನ್ನು ಆರಂಭಿಸಬೇಕು ಎಂದು ಒತ್ತಾಯಿಸಿ ರಾಯಚೂರು ವಿಶ್ವವಿದ್ಯಾಲಯ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸುಗ್ರೀವಾಜ್ಞೆ ಅಥವಾ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ತಿದ್ದುಪಡಿ ಮೂಲಕ ರಾಯಚೂರು ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.

ಹೈದರಾಬಾದ್ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳಿಗೆ 2011ರವರೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯ ಉನ್ನತ ಶಿಕ್ಷಣ ನೀಡುತ್ತಿತ್ತು. ಆದರೆ, ಬೆಳೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜುಗಳ ಹಿನ್ನೆಲೆಯಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಯವನ್ನು ವಿಭಜಿಸಿ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಕೃಷ್ಣದೇವರಾಯ ವಿಶ್ವವಿದ್ಯಾಲಯವನ್ನು ಬಳ್ಳಾರಿಯಲ್ಲಿ ಸ್ಥಾಪನೆ ಮಾಡಲಾಗಿದೆ.

ADVERTISEMENT

ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ 150 ಕಾಲೇಜುಗಳಿದ್ದು, ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಲು ಒತ್ತಾಯಿಸಿದ ಪರಿಣಾಮ 2017-18ನೇ ಸಾಲಿನ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿಗಳು ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದರು. ತಾಲ್ಲೂಕಿನ ಯರಗೇರಾ ಹತ್ತಿರ 250 ಎಕರೆ ಜಮೀನಿನಲ್ಲಿ ಕಳೆದ 30 ವರ್ಷಗಳಿಂದ ಸ್ನಾತಕೋತ್ತರ ಕೇಂದ್ರವನ್ನು ನೂತನ ವಿಶ್ವವಿದ್ಯಾಲಯವನ್ನಾವಗಿ ಮಾಡಲು ಸರ್ಕಾರ ಪ್ರಕ್ರಿಯೆ ಆರಂಭಿಸಲಾಗಿದೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2017ರಲ್ಲಿ ರಾಯಚೂರು ವಿಶ್ವವಿದ್ಯಾಲಯವನ್ನು ಸೇರಿಸಿ ಈ ಅಧಿನಿಯಮಕ್ಕೆ ಎರಡೂ ಸದನಗಳಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರ ಅನುಮೋದನೆಗಾಗಿ 2018ರಲ್ಲಿ ಕಳಿಸಲಾಗಿದೆ. ಆದರೆ, ರಾಜ್ಯಪಾಲರು ಈ ಅಧಿನಿಯಮವನ್ನು ಅನುಮೋದಿಸದೇ ವಾಪಸ್ ಕಳುಹಿಸಿದ್ದಾರೆ. ಸರ್ಕಾರ ರಾಷ್ಟ್ರಪತಿಯಿಂದ ಅನುಮೋದನೆ ಪಡೆಯಲು ನಿರ್ಧರಿಸಿರುವುದರಿಂದ ವಿಶ್ವವಿದ್ಯಾಲಯ ಸ್ಥಾಪನೆ ವಿಳಂಬವಾಗಲಿದೆ ಎಂದು ದೂರಿದರು.

ಹೋರಾಟ ಸಮಿತಿ ಸಂಚಾಲಕರಾದ ರಜಾಕ್ ಉಸ್ತಾದ್, ಅಶೋಕಕುಮಾರ ಜೈನ್, ವೀರೇಶ ಹೀರಾ, ಶರಣಬಸವ ಪಾಟೀಲ್, ಥಾಮಸ್, ವೀರೇಶ ಹೀರಾ, ಖಲೀಲ್ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.