ADVERTISEMENT

ಉಟಕನೂರು: ಬಸವಲಿಂಗ ತಾತನ ಪುಣ್ಯ ಸ್ಮರಣೆ

ಜ.15 ರಂದು ಮರಿಬಸವಲಿಂಗ ದೇಶೀಕೇಂದ್ರ ಶಿವಯೋಗಿಗಳ 32ನೇ ಜಾತ್ರಾ ಮಹೋತ್ಸವ

ಮಂಜುನಾಥ ಎನ್ ಬಳ್ಳಾರಿ
Published 13 ಜನವರಿ 2023, 23:00 IST
Last Updated 13 ಜನವರಿ 2023, 23:00 IST
ಕವಿತಾಳ ಸಮೀಪದ ಉಟಕನೂರು ಗ್ರಾಮದ ಅಡವಿ ಸಿದ್ದೇಶ‍್ವರ ಮಠ
ಕವಿತಾಳ ಸಮೀಪದ ಉಟಕನೂರು ಗ್ರಾಮದ ಅಡವಿ ಸಿದ್ದೇಶ‍್ವರ ಮಠ   

ಕವಿತಾಳ: ಸಮೀಪದ ಉಟಕನೂರಿನಲ್ಲಿ ಜನವರಿ 15 ರಂದು ಬಸವಲಿಂಗ ತಾತನವರ ಪುಣ್ಯಸ್ಮರಣೆ ಮತ್ತು ಮರಿಬಸವಲಿಂಗ ದೇಶೀಕೇಂದ್ರ ಶಿವಯೋಗಿಗಳ 32ನೇ ಜಾತ್ರಾ ಮಹೋತ್ಸವ ನಡೆಯಲಿದೆ.

ಈ ಮಠವು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಅಂಕಲಿಗಿ ಮಠದ ಅಡವಿ ಸಿದ್ದೇಶ್ವರ ಸ್ವಾಮಿಗಳ ಪರಂಪರೆ ಹೊಂದಿದೆ. ಮಠದಲ್ಲಿ ಇಂದಿಗೂ ಅಡವಿ ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುತ್ತದೆ.

ಭವ್ಯ ಪರಂಪರೆ ಹೊಂದಿದ ಉಟಕನೂರು ಮಠವು ಶರಣರ ಸಂತತಿಯಿಂದಾಗಿ ಆಚಾರ ಮಠವಾಗಿದ್ದು, 20ನೇ ಶತಮಾನದಲ್ಲಿ ಬದುಕಿ ಬಾಳಿದ ಗುರುಪಾದಯ್ಯಸ್ವಾಮಿ ಎನ್ನುವವರ ಮೂರನೇ ಪತ್ನಿಗೆ ಜನಿಸಿದ ಗಂಡು ಮಗು ಸಂಸಾರದ ಕಡೆ ಗಮನಕೊಡದೆ ಹುಚ್ಚರಂತೆ ವರ್ತಿಸ ತೊಡಗಿದಾಗ ಚಿಂತಿತರಾದ ಗುರುಪಾದಯ್ಯನವರು ಕೇದಾರದ ಜಗದ್ಗುರುಗಳ ಬಳಿ ತಮ್ಮ ನೋವನ್ನು ಹೇಳಿಕೊಂಡರು ಎನ್ನಲಾಗಿದೆ.

ADVERTISEMENT

ತಲೆಯಲ್ಲಿ ಸುಳಿ ಇಲ್ಲದ ಕಾಲಲ್ಲಿ ಗೆರೆ ಇಲ್ಲದ ಬಾಲಕನ ದಿವ್ಯ ತೇಜಸ್ಸನ್ನು ಕಂಡು ಇವನು ಹುಚ್ಚನಲ್ಲ ಜಗವನ್ನು ಮೆಚ್ಚಿಸುವ ಯೋಗಿಯಾಗುತ್ತಾನೆಂದು ಜಗದ್ಗುರುಗಳು ಆಶೀರ್ವದಿಸಿದರು ಎಂದು ಹೇಳಲಾಗುತ್ತಿದೆ.

ಜಗದ್ಗುರುಗಳ ಆಶೀರ್ವಾದದಂತೆ ಬಸವಲಿಂಗ ಎನ್ನುವ ಬಾಲಕ ದಿನ ಕಳೆದಂತೆ ಬಾಲಚಂದ್ರನಂತೆ ಕಂಗೊಳಿಸತೊಡಗಿದ್ದು ಶಿವ ಧ್ಯಾನಾಸಕ್ತರಾಗಿ ಪರರ ಕಷ್ಟ ನಷ್ಟಗಳನ್ನು ಪರಿಹರಿಸುತ್ತ ಶಾಪಾನುಗ್ರಹ ಸಮರ್ಥರೆನಿಸಿಕೊಂಡು ಹಸಿವು ತೃಷೆಗಳ ಕಡೆ ಗಮನಕೊಡದೆ ತನ್ನ ಯೋಗಾವಸ್ಥೆಯಲ್ಲಿಯೇ ಬಸವಲಿಂಗ ಶರಣರು ಕಾಲವನ್ನು ಕಳೆದರು ಮಗುವಿನಂತೆ ಅವರು ಆಡಿದ ಆಟಗಳೆಲ್ಲಾ ಲೀಲೆಗಳಾದವು.

1992 ರಲ್ಲಿ ಸ್ವಾಮಿಗಳು ಪರಬ್ರಹ್ಮ ಸ್ವರೂಪದಲ್ಲಿ ಲೀನರಾದರು ನಂತರ ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲಿ ಹಾವಿನ ರೂಪದಲ್ಲಿ ಭಕ್ತರಿಗೆ ಗೋಚರಿಸಿದರು ಈಗಲೂ ರಾಯಚೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅವರ ಗದ್ದುಗೆಗಳನ್ನು ಸ್ಥಾಪಿಸಲಾಗಿದ್ದು ಲಕ್ಷಾಂತರ ಭಕ್ತರ ಮನದಲ್ಲಿ ನೆಲೆಸಿದ್ದಾರೆ.

ಶ್ರೀಗಳ ಕಾಲಾ ನಂತರ ಮಠದ ಪೀಠಾಧಿಪತಿಗಳಾಗಿರುವ ಮರಿಬಸವರಾಜ ದೇಶೀಕೇಂದ್ರ ಸ್ವಾಮೀಜಿಗಳು ಮಠದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಈ ರೀತಿ ನಡೆದಾಡುವ ದೇವರೆಂದೇ ಖ್ಯಾತಿ ಹೊಂದಿದ ಮರಿಬಸವಲಿಂಗ ತಾತನವರ ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಭಾಗವಹಿಸಲಿದ್ದು ಹೂವಿನ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.