ADVERTISEMENT

ಮಸ್ಕಿ | ‘ವಾಲ್ಮೀಕಿ ಸಮಾಜ ಶೈಕ್ಷಣಿಕವಾಗಿ ಮುಂದೆ ಬರಲಿ’

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 7:54 IST
Last Updated 3 ನವೆಂಬರ್ 2025, 7:54 IST
ಮಸ್ಕಿಯಲ್ಲಿ ಭಾನುವಾರ ನಡೆದ ವಾಲ್ಮೀಕಿ ಜಯಂತಿ ಹಾಗೂ ತಾಲ್ಲೂಕು ಸಮಾವೇಶವನ್ನು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಉದ್ಘಾಟಿಸಿದರು
ಮಸ್ಕಿಯಲ್ಲಿ ಭಾನುವಾರ ನಡೆದ ವಾಲ್ಮೀಕಿ ಜಯಂತಿ ಹಾಗೂ ತಾಲ್ಲೂಕು ಸಮಾವೇಶವನ್ನು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಉದ್ಘಾಟಿಸಿದರು   

ಮಸ್ಕಿ: ‘ವಾಲ್ಮೀಕಿ ನಾಯಕ ಸಮಾಜ ಆರ್ಥಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಮುಂದೆ ಬಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ’ ಎಂದು ಮಹರ್ಷಿ ವಾಲ್ಮೀಕಿ ಪರಿಶಿ ಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹೇಳಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಭಾನುವಾರ ವಾಲ್ಮೀಕಿ ಮಹಾಸಭಾ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಹಾಗೂ ಸಮಾಜದ ತಾಲ್ಲೂಕು ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ರಾಯಚೂರು ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿ ಅವರ ಹೆಸರು ನಾಮಕರಣ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಸಮಾಜದ ಬಹುದಿನದ ಕನಸು ಈಡೇರಿಸಿದೆ. ವಾಲ್ಮೀಕಿ ಸಮಾಜದವರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಮಕ್ಕಳ ಭವಿಷ್ಯದ ಕಡೆ ಗಮನ ಕೊಡಬೇಕು’ ಎಂದರು.

ADVERTISEMENT

ಶಾಸಕರೂ ಆದ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ,‘ಅಂಬೇಡ್ಕರ್ ಹಾಗೂ ಶರಣರ ಚಿಂತನೆಗಳನ್ನು ಸಮಾಜ ಅಳವಡಿಸಿಕೊಂಡಿದೆ. ಸಮಾಜದ ಜನರು ಶೈಕ್ಷಣಿಕವಾಗಿ ಮುಂದೆ ಬಂದು ಆರ್ಥಿಕವಾಗಿ ಸದೃಢತೆ ಹೊಂದಬೇಕು’ ಎಂದು ಹೇಳಿದರು.

‘ಕೇವಲ ಒಂದು ವಾರದಲ್ಲಿ ಬೃಹತ್ ಸಮಾವೇಶ ಏರ್ಪಡಿಸುವ ಮೂಲಕ ಇಲ್ಲಿಯ ಸಮಾಜದ ಯುವಕರು ಉತ್ತಮ ಕೆಲಸ ಮಾಡಿದ್ದಾರೆ’ ಎಂದರು.

ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ,‘ ವಾಲ್ಮೀಕಿ ನಾಯಕ ಸಮಾಜದ ಜನರು ಸಂಘಟಿತರಾಗಬೇಕು’ ಎಂದು ಹೇಳಿದರು.

ಗೋಲಪಲ್ಲಿಯ ಪರಮಾನಂದ ಸ್ವಾಮೀಜಿ, ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಆತ್ಮಾನಂದ ಸ್ವಾಮೀಜಿ ಸೇರಿದಂತೆ ಸಮಾಜದ ಅನೇಕ ಮುಖಂಡರು ಇದ್ದರು.

ಅದ್ದೂರಿ ಮೆರವಣಿಗೆ: ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಸಮಾವೇಶದ ಪ್ರಯುಕ್ತ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಪಟ್ಟಣದಲ್ಲಿ ನಡೆಯಿತು.

ವಾಲ್ಮೀಕಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಾವಿರಕ್ಕೂ ಹೆಚ್ಚು ಮಹಿಳೆಯರು ಕುಂಭ–ಕಳಸ ಹೊತ್ತು ಪಾಲ್ಗೊಂಡಿದ್ದರು. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ವಿವಿಧ ಜಾನಪದ ತಂಡಗಳು ಭಾಗಿ ಕುಂಭ ಹೊತ್ತು ಸಾಗಿದ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಸೇರಿದ ಜನರು

‘2028ಕ್ಕೆ ಮೀಸಲು ಬದಲು ಸಾಧ್ಯತೆ’

ಮಾಜಿ ಸಚಿವ ಕೆ.ಶಿವನಗೌಡ ನಾಯಕ ಮಾತನಾಡಿ‘2028ಕ್ಕೆ ವಿಧಾನಸಭಾ ಕ್ಷೇತ್ರಗಳ ಮೀಸಲು ಬದಲಾವಣೆಯಾಗುವ ಸಂಭವ ಹೆಚ್ಚಿದೆ’ ಎಂದು ಹೇಳುವ ಮೂಲಕ ಮೀಸಲಾತಿ ಬದಲಾವಣೆ ಸುಳಿವು ನೀಡಿದರು. ‘ಆರ್.ಬಸನಗೌಡ ತುರ್ವಿಹಾಳ ಸೇರಿದಂತೆ ಈಗಿನ ಶಾಸಕರು ಎರಡೂವರೆ ವರ್ಷಗಳಲ್ಲಿ ಉತ್ತಮ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು. ‘ವಾಲ್ಮೀಕಿ ಸಮಾಜ ಮಸ್ಕಿಯಲ್ಲಿ ಬೃಹತ್ ಸಮಾವೇಶ ಏರ್ಪಡಿಸುವ ಮೂಲಕ ಸಮಾಜದ ಸಂಘಟನೆಗೆ ಮುಂದಾಗಿರುವುದು ಶ್ಲಾಘನೀಯ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.