ADVERTISEMENT

ರಾಯಚೂರು: ವಾಲ್ಮೀಕಿ ಜೀವನ ಸಂದೇಶ ಸಾರ್ವಕಾಲಿಕ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:43 IST
Last Updated 8 ಅಕ್ಟೋಬರ್ 2025, 5:43 IST
ರಾಯಚೂರಿನ ಆಶಾಪುರ ರಸ್ತೆಯ ವಾಲ್ಮೀಕಿ ಭವನದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಸಂಸದ ಜಿ.ಕುಮಾರ ನಾಯಕ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ ಜಂಟಿಯಾಗಿ ಉದ್ಘಾಟಿಸಿದರು. ಜಿಲ್ಲಾಧಿಕಾರಿ ನಿತೀಶ್, ಎಸ್‌.ಪಿ ಪುಟ್ಟಮಾದಯ್ಯ, ಸಮಾಜದ ಮುಖಂಡರು ಉಪಸ್ಥಿತರಿದ್ದರು
ರಾಯಚೂರಿನ ಆಶಾಪುರ ರಸ್ತೆಯ ವಾಲ್ಮೀಕಿ ಭವನದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಸಂಸದ ಜಿ.ಕುಮಾರ ನಾಯಕ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ ಜಂಟಿಯಾಗಿ ಉದ್ಘಾಟಿಸಿದರು. ಜಿಲ್ಲಾಧಿಕಾರಿ ನಿತೀಶ್, ಎಸ್‌.ಪಿ ಪುಟ್ಟಮಾದಯ್ಯ, ಸಮಾಜದ ಮುಖಂಡರು ಉಪಸ್ಥಿತರಿದ್ದರು    

ರಾಯಚೂರು: ‘ಮಹರ್ಷಿ ವಾಲ್ಮೀಕಿ ಅವರ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.

ಆಶಾಪುರ ರಸ್ತೆಯ ವಾಲ್ಮೀಕಿ ಭವನದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಮಹರ್ಷಿ ವಾಲ್ಮೀಕಿಯವರು ವಾಲ್ಮೀಕಿ ರಾಮಾಯಣ ಮಹಾಕಾವ್ಯ ರಚಿಸಿ ಮನುಕುಲಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಅದರಲ್ಲಿರುವ ಸಂದೇಶಗಳು ಸಾರ್ವಕಾಲಿಕವಾಗಿವೆ’ ಎಂದು ತಿಳಿಸಿದರು.

ADVERTISEMENT

‘ವಾಲ್ಮೀಕಿ ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಲಾಗದು. ಮನುಕುಲದ ಒಳಿತು ಬಯಸಿದ ಮಹಾನ್‌ ವ್ಯಕ್ತಿಯಾಗಿದ್ದಾರೆ’ ಎಂದು ಬಣ್ಣಿಸಿದರು.

‘ರಾಜ್ಯ ಸರ್ಕಾರ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿದ್ದು ಸ್ತುತ್ಯರ್ಹವಾಗಿದೆ’ ಎಂದು ಹೇಳಿದರು.

ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ‘ಮಹರ್ಷಿ ವಾಲ್ಮೀಕಿ 12 ಸಾವಿರ ವರ್ಷಗಳ ಹಿಂದೆಯೇ ರಾಮಾಯಣ ಬರೆದು ಸಂಬಂಧಗಳ ಮಹತ್ವ ತಿಳಿಸಿಕೊಟ್ಟಿದ್ದಾರೆ’ ಎಂದು ತಿಳಿಸಿದರು.

ಸುರಪುರದ ನಿವೃತ್ತ ಪ್ರಾಚಾರ್ಯ ಜೆ.ವೇಣುಗೋಪಾಲ ನಾಯಕ ಮಾತನಾಡಿ, ‘ಮಹರ್ಷಿ ವಾಲ್ಮೀಕಿ ಅವರನ್ನು ನಾವೆಲ್ಲರೂ ಸ್ವಾಭಿಮಾನದ ಪ್ರತೀಕವಾಗಿ ಸ್ವೀಕರಿಸಬೇಕು.  ವಾಲ್ಮೀಕಿ ರಾಮಾಯಣ ಮಹಾಕಾವ್ಯ ಬರೆದು ಸರ್ವಧರ್ಮೀಯರಿಗೂ ಪೂಜ್ಯರಾಗಿದ್ದಾರೆ. ಮಹರ್ಷಿ ವಾಲ್ಮೀಕಿ ಅವರ ಜೀವನದ ಪಾಠ ನಮ್ಮ ಬದುಕಿನ ಬದಲಾವಣೆಗೆ ನಾಂದಿ ಆಗಬೇಕು’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ, ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಚನ್ನಬಸವ ನಾಯಕ, ಸಮಾಜದ ಮುಖಂಡರಾದ ತಾಯಣ್ಣ ನಾಯಕ, ಮಾರಪ್ಪ ಬುದ್ದಿನ್ನಿ, ರಾಜಾ ಪಾಂಡುರಂಗ ನಾಯಕ, ಭೀಮರಾಯ ನಾಯಕ, ವೆಂಕಟೇಶ ನಾಯಕ, ರಘುವೀರ ನಾಯಕ, ನಾರಾಯಣ ನಾಯಕ, ಶಿವಪ್ಪ ನಾಯಕ, ಮಲ್ಲಿಕಾರ್ಜುನ ನಾಯಕ ಹಾಗೂ ವೆಂಕಟೇಶ ಹಾಸ್ಕಿಹಾಳ ಉಪಸ್ಥಿತರಿದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ರಾಯಚೂರಿನ ವಾಲ್ಮೀಕಿ ಭವನದ ಅಭಿವೃದ್ಧಿಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹50 ಲಕ್ಷ ಅನುದಾನ ಕೊಡಲಾಗುವುದು.
ಜಿ.ಕುಮಾರ ನಾಯಕ ಸಂಸದ

ಸಂವಿಧಾನದ ಪೀಠಿಕೆ ಬೋಧನೆ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ಆಶಾಪುರ ರಸ್ತೆಯ ವಾಲ್ಮೀಕಿ ಭವನದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ.‌ ಅವರು ಭಾರತ ಸಂವಿಧಾನದ ಪೂರ್ವ ಪೀಠಿಕೆ ಬೋಧಿಸಿದರು. ನಂತರ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸಮಾಜದ ಮುಖಂಡರು ಸನ್ಮಾನಿಸಿದರು.

ವಿವಿಧೆಡೆ ಆದಿಕವಿ ಸ್ಮರಣೆ ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಆಡಳಿತ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಸಂಸದ ಜಿ.ಕುಮಾರ ನಾಯಕ ಕುಲಪತಿ ಎಂ.ಹನುಮಂತಪ್ಪ ಅವರು ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮಸ್ಕಿಯ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಮಹಾಂತಗೌಡ ಪಾಟೀಲ ಉಪನ್ಯಾಸ ನೀಡಿದರು. ವ್ಯವಸ್ಥಾಪನ ಮಂಡಳಿ ಸದಸ್ಯ ಮಲ್ಲಿಕಾರ್ಜುನ.ಡಿ ಹಣಕಾಸು ನಿಯಂತ್ರಣಾಧಿಕಾರಿ ಹನುಮೇಶ ಆಡಳಿತಾಧಿಕಾರಿ ಜಾಗೃತಿ ಬಿ.ದೇಶಮಾನೆ ಮಾತನಾಡಿದರು. ಮಲ್ಲೇಶ ಕೊಲಿಮಿ ಅಮರೇಗೌಡ ಎ. ಗುರುರಾಜ ಸುಂಕದ ನಾರಾಯಣರಾವ್ ಸತೀಶಕುಮಾರ ಮಚ್ಚೇಂದ್ರನಾಥ ಎಂ.ಮಹಾದೇವಸ್ವಾಮಿ ಉಪಸ್ಥಿತರಿದ್ದರು. ರಾಜಣ್ಣ ಸ್ವಾಗತಿಸಿದರು. ಅಮರೇಶ ನಿರೂಪಿಸಿದರು. ವಿರುಪಣ್ಣ ವಂದಿಸಿದರು. ಚನ್ನಬಸಮ್ಮ ಕಾಲೇಜು: ನಗರದ ಚನ್ನಬಸಮ್ಮ ಎಂ.ನಾಗಪ್ಪ ಬಾಲಕಿಯರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ವೆಂಕಟೇಶ ದೊಡ್ಡಮನಿ ಅವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಉಪನ್ಯಾಸಕರಾದ ಸಲ್ಮಾಬಾನು ರಾಘಮ್ಮ ಗೋವಿಂದರಾಜ.ಎನ್ ಚಿನ್ನಪ್ಪ ಮಹೇಶ ಹಾಗೂ ಭೀಮಣ್ಣ ಭಂಡಾರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.